ಕಿರಿಕ್ ಲವ್‌ಸ್ಟೋರಿ: ಸ್ವಲ್ಪಕಿರಿಕ್ ಮತ್ತು ಸ್ವಲ್ಪ ಶಾಕ್!

Update: 2019-02-16 18:58 GMT

ಕಾಲೇಜ್ ಕ್ಯಾಂಪಸ್ ಹಿಂದಿನಿಂದಲೂ ಒಂದೇ ರೀತಿಯಲ್ಲಿರುತ್ತವೆ. ಆದರೆ ಕಾಲ ಕಾಲಕ್ಕೆ ಹೊಸ ವಿದ್ಯಾರ್ಥಿಗಳು ಬರುತ್ತಲೇ ಇರುತ್ತಾರೆ. ಹಾಗಾಗಿ ಅದೇ ಕ್ಯಾಂಪಸ್ ಸದಾ ಹೊಸತಾಗಿ ಗೋಚರಿಸುತ್ತಿರುತ್ತದೆ. ಈ ಕ್ಯಾಂಪಸ್ ಲವ್ ಸ್ಟೋರಿ ಕೂಡ ಅಷ್ಟೇ. ಅದೇ ಹಳೇ ಲವ್ವ, ಕ್ರಶ್ಶು ಎನ್ನುವುದರಾಚೆಗೆ ಹೊಸ ಕಲಾವಿದರನ್ನು ಮಾತ್ರ ತೋರಿಸಲು ಸಾಧ್ಯ ಎನ್ನುವುದನ್ನು ಕಿರಿಕ್ ಲವ್ ಸ್ಟೋರಿ ಸಾಬೀತು ಮಾಡಿದೆ. ಚಿತ್ರದಲ್ಲಿ ಪ್ರಧಾನ ಪಾತ್ರ ನಿರ್ವಹಿಸಿರುವ ಪ್ರಿಯಾ ವಾರಿಯರ್ ಮತ್ತು ರೋಶನ್ ಅವರ ನಿಜವಾದ ಹೆಸರನ್ನೇ ಪಾತ್ರಗಳಿಗೂ ನೀಡಲಾಗಿದೆ.

ಪ್ರಥಮ ಪಿಯುಸಿಗೆ ಹೊಸ ವಿದ್ಯಾರ್ಥಿಗಳು ಪ್ರವೇಶಿಸುವಾಗ ನಡೆಸುವ ರ್ಯಾಗಿಂಗ್ ಮೂಲಕವೇ ಚಿತ್ರ ಶುರುವಾಗುತ್ತದೆ. ರೋಶನ್ ಮತ್ತು ಪ್ರಿಯಾ ಮಧ್ಯೆ ಪ್ರೀತಿ ಮೂಡುವುದು ಮತ್ತು ಬ್ರೇಕ್ ಅಪ್ ಆಗುವವರೆಗೆ ಸಾಧಾರಣ ಕತೆಯೊಂದಿಗೆ ಸಾಗುವ ಚಿತ್ರದಲ್ಲಿ ನಿಜವಾದ ಟ್ವಿಸ್ಟ್ ಉಂಟಾಗುವುದೇ ಕ್ಲೈಮ್ಯಾಕ್ಸ್‌ನಲ್ಲಿ. ಆದರೆ ಕಾಲೇಜ್ ಹುಡುಗರ ಟೈಮ್‌ಪಾಸ್ ಲವ್ವನ್ನು ಎಂಜಾಯ್ ಮಾಡಲಾಗದವರು ಕ್ಲೈಮ್ಯಾಕ್ಸ್ ತನಕ ಕಾಯಲು ಕಷ್ಟಪಡಬೇಕಾದೀತು. ಎಲ್ಲರಿಗೂ ತಿಳಿದಿರುವ ಹಾಗೆ ಇದು ಮಲಯಾಳಂನಿಂದ ಡಬ್ ಆಗಿರುವ ಚಿತ್ರ. ಆದರೆ ಡಬ್ಬಿಂಗ್‌ನಲ್ಲಿ ಕೂಡ ಗುಣಮಟ್ಟ ಉತ್ತಮವಾಗಿ ಕಾಯ್ದುಕೊಂಡಿರುವುದು ವಿಶೇಷ. ಸಾಮಾನ್ಯವಾಗಿ ಮಲಯಾಳಂಗೆ ಡಬ್ ಆಗುವ ಚಿತ್ರಗಳಲ್ಲಿ ನಾಲ್ಕೈದು ಪಾತ್ರಗಳಿಗೆ ಒಬ್ಬರೇ ಧ್ವನಿ ಬದಲಾಯಿಸಿ ಕಂಠದಾನ ಮಾಡುವ ಪ್ರಯತ್ನ ನಡೆಸುತ್ತಾರೆ. ಅಂಥ ಸಂಭಾಷಣೆಗಳನ್ನು ಕೇಳುವಾಗ ತಲೆಕೆಟ್ಟು ಹೋಗುವುದಿದೆ. ಆದರೆ ಇಲ್ಲಿ ಅಂಥ ಅಭಾಸಗಳನ್ನು ನಡೆಸಿಲ್ಲ. ಕಂಠದಾನ ಮಾಡಿದವರೆಲ್ಲರೂ ಪಾತ್ರಗಳ ತುಟಿ ಚಲನೆಗೆ ಪೂರಕವಾಗಿ ಸಂಭಾಷಣೆ ಕೂರಿಸುವಲ್ಲಿ ಗೆದ್ದಿದ್ದಾರೆ.

ಆ ನಿಟ್ಟಿನಲ್ಲಿ ಸಂಭಾಷಣೆಯನ್ನು ರಚಿಸಿದವರಿಗೂ ಕ್ರೆಡಿಟ್ ಸಲ್ಲಬೇಕು. ನಾಯಕಿಯಾಗಿ ಪ್ರಿಯಾ ಪ್ರಕಾಶ್ ವಾರಿಯರ್ ಚಿತ್ರ ಬಿಡುಗಡೆಗೂ ಮುನ್ನವೇ ತನ್ನ ಕಣ್ಸನ್ನೆಯ ದೃಶ್ಯದ ಮೂಲಕ ವಿಶ್ವದ ಗಮನ ಸೆಳೆದವರು. ಅದೇ ಕಾರಣದಿಂದಲೇ ಚಿತ್ರವನ್ನು ಕನ್ನಡದಲ್ಲಿಯೂ ಡಬ್ ಮಾಡಲಾಗಿತ್ತು. ನಿರೀಕ್ಷೆಗೆ ತಕ್ಕಂತೆ 'ಮಾಣಿಕ್ಯ' ಎನ್ನುವ ಹಾಡಿನಲ್ಲಿ ಬರುವ ಕಣ್ಸನ್ನೆ, ಗನ್ ಶಾಟ್‌ನಲ್ಲಿ ಫ್ಲೈಯಿಂಗ್ ಕಿಸ್ ಮೊದಲಾದವುಗಳ ಜೊತೆಗೆ ಒಂದು ಚುಂಬನ ದೃಶ್ಯವೂ ಇದೆ. ನಾಯಕನಾಗಿ ರೋಶನ್ ಅಬ್ದುಲ್ ರವೂಫ್ ಕೂಡ ರೊಮ್ಯಾಂಟಿಕ್ ಸ್ಟಾರ್ ಎನ್ನುವಂತೆ ಮಿಂಚಿದ್ದಾರೆ.

ನಾಯಕನ ಸ್ನೇಹಿತೆಯಾಗಿ ನೂರಿನ್ ಷರೀಫ್ ಮತ್ತೊಂದು ಆಕರ್ಷಕ ಪಾತ್ರಕ್ಕೆ ಜೀವ ನೀಡಿದ್ದಾರೆ. ಜೊತೆಗೆ ಕಾಲೇಜ್ ಲವ್ ಸ್ಟೋರಿ ಎಂದೊಡನೆ, ಎಲ್ಲ ಭಾಷೆಯಲ್ಲಿಯೂ ಟ್ರೆಂಡ್ ಆಗಿದ್ದಂಥ ಶಿಕ್ಷಕರನ್ನು ಬಫೂನ್‌ಗಳಂತೆ ಚಿತ್ರಿಸುವ ಪ್ರಕ್ರಿಯೆ ಇಲ್ಲಿಯೂ ನಡೆದಿದೆ. ಲವ್ ಸ್ಟೋರಿಗೆ ಬೇಕಾದ ಆಕರ್ಷಕ ಹಾಡುಗಳು ಚಿತ್ರದಲ್ಲಿವೆ. ಆದರೆ ಕೇರಳದ ನಟ ಕಲಾಭವನ್ ಮಣಿಗೆ ಟ್ರಿಬ್ಯೂಟ್ ನೀಡಿರುವ ಹಾಡನ್ನೇ ಕನ್ನಡದಲ್ಲಿ ಅಂಬರೀಷ್ ಅವರಿಗೆ ಟ್ರಿಬ್ಯೂಟ್ ಆಗಿ ತೋರಿಸಿರುವುದು ಸೆಂಟಿಮೆಂಟ್ ಮೇಲೆ ಮಾಡಲಾದ ವ್ಯಾಪಾರೀ ಮನೋಭಾವದ ದಾಳಿ ಎಂದೇ ಹೇಳಬೇಕಾಗಿದೆ. ಆದರೆ ಮೂಲ ಮಲಯಾಳಂ ಚಿತ್ರಕ್ಕೆ ಹೋಲಿಸಿದರೆ ಅಲ್ಲಿನ ಸಭ್ಯ ಪ್ರೇಕ್ಷಕರಿಗೆ ತಲೆ ನೋವಾಗಿರುವ ಬಹಳಷ್ಟು ಡಬಲ್ ಮೀನಿಂಗ್ ಸಂಭಾಷಣೆಗಳಿಗೆ ಇಲ್ಲಿ ಸಾಧ್ಯವಾದ ಮಟ್ಟಿಗೆ ಕತ್ತರಿ ಪ್ರಯೋಗಿಸಿರುವುದು ಪ್ರಶಂಸಾರ್ಹ. ಚಿತ್ರದ ಕೊನೆಯಲ್ಲಿ ನೀಡಲಾದ ಸಂದೇಶ ಟೀನೇಜ್‌ನ ಎಲ್ಲ ಆಟಾಟೋಪಗಳ ಮೇಲೆಯೂ ಎಚ್ಚರಿಕೆ ವಹಿಸುವಂತಿದೆ. ಹಾಗಾಗಿ ಚಿತ್ರದ ಸಂದೇಶದ ವಿಚಾರದಲ್ಲಿ ಸಂದೇಹವಿಲ್ಲ. ಆದರೆ ಸಂದೇಶಕ್ಕಿಂತ ಹೆಚ್ಚು ಚಿತ್ರದ ಸನ್ನಿವೇಶಗಳೇ ಹರೆಯದ ಹುಡುಗರಿಗೆ ಸ್ಫೂರ್ತಿಯಾಗುವ ಹಾಗೆ ಆಗದಿರಲಿ ಎಂದು ಬಯಸೋಣ.


ತಾರಾಗಣ: ಪ್ರಿಯಾ ಪ್ರಕಾಶ್ ವಾರಿಯರ್, ರೋಶನ್
ನಿರ್ದೇಶನ: ಒಮರ್ ಲುಲು
ನಿರ್ಮಾಣ: ಔಸೇಪಚ್ಚನ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News