ಆಸ್ಟ್ರೇಲಿಯಾ ಪೊಲೀಸರಿಗೂ ಬೇಕು ರಜಿನಿಕಾಂತ್ !

Update: 2019-02-17 08:50 GMT

ಚೆನ್ನೈ, ಫೆ.17: ಸೂಪರ್‍ ಸ್ಟಾರ್ ರಜಿನಿಕಾಂತ್ ಕೇವಲ ಭಾರತೀಯರ ಹೃದಯ ಗೆದ್ದಿರುವುದಷ್ಟೇ ಅಲ್ಲ; ವಿದೇಶಗಳಲ್ಲೂ ಜನಪ್ರಿಯರಾಗಿದ್ದಾರೆ. ಇತ್ತೀಚೆಗೆ ಆಸ್ಟ್ರೇಲಿಯಾ ಪೊಲೀಸರು ಡರ್ಬಿ ಪಟ್ಟಣದಲ್ಲಿ, ಪಾನಮತ್ತರಾಗಿ ವಾಹನ ಚಾಲನೆ ಮಾಡುವುದರ ಪರಿಣಾಮದ ಬಗ್ಗೆ ವಿವರಿಸಲು ರಜಿನೀಕಾಂತ್ ಅವರ ಚಿತ್ರಕ್ಕೆ ಮೊರೆ ಹೋಗಿದ್ದಾರೆ.

ಡರ್ಬಿ ಪೊಲೀಸರು ರಜಿನಿ ಚಿತ್ರವನ್ನು ಟ್ವೀಟ್‍ ನಲ್ಲಿ ಬಳಸಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಕಾರು ಚಾಲನೆ ಮಾಡುತ್ತಿರುವ ಒಬ್ಬ ಪಾನಮತ್ತ ವ್ಯಕ್ತಿಯ ಉಸಿರಾಟದ ವಿಶ್ಲೇಷಣೆ ಫಲಿತಾಂಶವನ್ನೂ ಈ ಟ್ವೀಟ್ ಜತೆಗೆ ಬಳಸಿಕೊಂಡಿದ್ದಾರೆ.

"ಡರ್ಬಿ ಪೊಲೀಸರು ಉಸಿರಾಟ ವಿಶ್ಲೇಷಕ ಯಂತ್ರದಿಂದ ಇಂದು ಮುಂಜಾನೆ ಒಬ್ಬ ವ್ಯಕ್ತಿಯನ್ನು ಪರೀಕ್ಷಿಸಿದಾಗ ಜೈವಿಕವಾಗಿ ಅಸಾಧ್ಯ ಎನಿಸುವ ಫಲಿತಾಂಶ ಸಿಕ್ಕಿದೆ. ಈ ವ್ಯಕ್ತಿ 0.341% ಬಿಎಸಿ ಹೊಂದಿದ್ದು, ಇದು ವಾಸ್ತವವಾಗಿ ಕೋಮಾದಲ್ಲಿರುವ ಸ್ಥಿತಿಗೆ ಸಮ. ಈತ ಜೀವಿಸಲು ಅನರ್ಹ" ಎಂದು ಶೀರ್ಷಿಕೆ ನೀಡಲಾಗಿದೆ. ಇದರ ಜತೆಗೆ 2.0 ಚಿತ್ರದಲ್ಲಿ ಆ್ಯಮಿ ಜಾಕ್ಸನ್ ಜತೆ ರಜನಿಕಾಂತ್ ಕುಳಿತಿರುವ ಒಂದು ದೃಶ್ಯವನ್ನೂ ಬಳಸಿಕೊಳ್ಳಲಾಗಿದೆ. ಇದರಲ್ಲಿ ರಜಿನಿ ಆಶ್ಚರ್ಯಚಕಿತರಾಗಿ ನೋಡುತ್ತಾರೆ. ಇದೀಗ ಈ ಟ್ವೀಟ್ ವೈರಲ್ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News