ಈಜಿಪ್ಟ್ ಚಿತ್ರ ಹಿಂದಿಗೆ ರಿಮೇಕ್

Update: 2019-02-17 10:27 GMT

ಬಾಲಿವುಡ್‌ಗೆ ರಿಮೇಕ್ ಚಿತ್ರಗಳ ಮೋಹ ಹೊಸದೇನಲ್ಲ. ದಕ್ಷಿಣ ಭಾರತೀಯ ಚಿತ್ರಗಳನ್ನು, ಹಾಲಿವುಡ್ ಚಿತ್ರಗಳನ್ನು ರಿಮೇಕ್ ಮಾಡುವುದರಲ್ಲಿ ಪಳಗಿರುವ ಬಾಲಿವುಡ್ ಮಂದಿ ಇತ್ತೀಚಿನ ದಿನಗಳಲ್ಲಿ ಕೊರಿಯನ್ ಚಿತ್ರಗಳ ರಿಮೇಕ್‌ನಲ್ಲೂ ಆಸಕ್ತಿ ವಹಿಸುತ್ತಿದ್ದಾರೆ. ಇದೀಗ ಹಿಂದಿ ಚಿತ್ರರಂಗದ ಖ್ಯಾತ ನಿರ್ಮಾಪಕ ಬೊನಿ ಕಪೂರ್, ಈಜಿಪ್ಟ್‌ನ ಚಿತ್ರ ‘‘ಹೆಪ್ತಾ ದಿ ಲಾಸ್ಟ್ ಲೆಕ್ಚರ್’’ ಚಿತ್ರವನ್ನು ಹಿಂದಿಗೆ ತರಲು ನಿರ್ಧರಿಸಿದ್ದಾರೆ.

ಬೊನಿಕಪೂರ್ ತನ್ನ ಬೇವ್ಯೆವ್ ಬ್ಯಾನರ್‌ನಡಿಯಲ್ಲಿ ಈ ಚಿತ್ರವನ್ನು ನಿರ್ಮಿಸಲಿದ್ದು, ಫ್ರೆಶ್ ಲೈಮ್ ಫಿಲ್ಮ್ಸ್ ಸಂಸ್ಥೆ ಸಹ ನಿರ್ಮಾಪಕರಾಗಿದ್ದಾರೆ. ಹೆಫ್ತಾ ಚಿತ್ರವನ್ನು ಹಿಂದಿ ಮಾತ್ರವಲ್ಲ ಇತರ ಭಾರತೀಯ ಭಾಷೆಗಳ ಚಿತ್ರಗಳಲ್ಲಿ ನಿರ್ಮಿಸುವ ಯೋಚನೆಯನ್ನು ಬೋನಿ ಕಪೂರ್ ಹೊಂದಿದ್ದಾರೆ.

ಖ್ಯಾತ ಈಜಿಪ್ಟಿಯನ್ ಸಾಹಿತಿ ಮುಹಮ್ಮದ್ ಸಾದಿಕ್ ಅವರ ಜನಪ್ರಿಯ ಕಾದಂಬರಿ ಯೊಂದನ್ನು ಆಧರಿಸಿದ ‘ಹೆಪ್ತಾ’ ಚಿತ್ರವನ್ನು ಹದಿ ಅಲ್ ಬಗೌರಿ ನಿರ್ದೇಶಿಸಿದ್ದರು. ರೊಮ್ಯಾಂಟಿಕ್ ಕಥಾವಸ್ತುವನ್ನು ಹೊಂದಿರುವ ಈ ಚಿತ್ರವು ಈಜಿಪ್ಟ್‌ನ ಇತಿಹಾಸದಲ್ಲೇ ಅತ್ಯಧಿಕ ಗಳಿಕೆಯನ್ನು ಕಂಡ ಚಿತ್ರಗಳಲ್ಲೊಂದೆನಿಸಿದೆ.

‘‘ಭಾರತ ಹಾಗೂ ಈಜಿಪ್ಟ್‌ಗಳು ಪುರಾತನ ಕಾಲದಿಂದಲೂ ಪರಸ್ಪರರ ಸಂಸ್ಕೃತಿ, ಕಲೆ ಹಾಗೂ ವಾಸ್ತುಶಿಲ್ಪದ ಮೇಲೆ ಗಾಢವಾದ ಪ್ರಭಾವವನ್ನು ಬೀರುತ್ತಲೇ ಬಂದಿವೆ. ಇದೀಗ ಈಜಿಪ್ಟಿಯನ್ ಚಿತ್ರರಂಗದ ಜೊತೆ ಕೈಜೋಡಿಸಲು ತನಗೆ ಸಂತಸವಾಗುತ್ತಿದೆಯೆಂದು ಬೋನಿ ಹೇಳಿಕೊಂಡಿದ್ದಾರೆ.

‘‘ಇದೊಂದು ಕೇವಲ ಆರಂಭವಷ್ಟೇ. ಮುಂಬರುವ ದಿನಗಳಲ್ಲಿ ಈಜಿಪ್ಟ್ ಹಾಗೂ ಭಾರತೀಯ ಚಿತ್ರಗಳು ಉಭಯ ದೇಶಗಳಲ್ಲಿ ರಿಮೇಕ್ ಆಗಲಿರುವುದನ್ನು ನಾವು ಕಾಣಲಿದ್ದೇವೆ’’ ಎಂದು ಬೋನಿ ಆಶಾವಾದ ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ ಬೋನಿ ಕಪೂರ್ ಅವರು ಬಾಲಿವುಡ್‌ನ ಪಿಂಕ್ ಚಿತ್ರವನ್ನು ತಮಿಳಿಗೆ ರಿಮೇಕ್ ಮಾಡುತ್ತಿದ್ದು, ಅದಕ್ಕೆ ಎಕೆ 59 ಎಂದು ಹೆಸರಿಡಲಾಗಿದೆ. ತಮಿಳಿನ ಸೂಪರ್‌ಸ್ಟಾರ್ ಈ ಚಿತ್ರದ ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News