ಪ್ರೇಕ್ಷಕರ ಮನ ತಟ್ಟುವ ಚಿತ್ರಕಥೆ ‘ದೇಯಿ ಬೈದೆತಿ’

Update: 2019-02-19 18:37 GMT

ತುಳುನಾಡಿನ ಇತಿಹಾಸ ಪುರುಷರ ಕುರಿತಂತೆ, ಕಾರಣಿಕ, ದೈವೀಶಕ್ತಿ ಕುರಿತಂತೆ ಕೆಲವೊಂದು ತುಳು ಚಿತ್ರಗಳು ಪ್ರದರ್ಶನ ಕಂಡು ಯಶಸ್ವಿಯಾಗಿವೆ. ಈ ನಡುವೆಯೇ, ತುಳುನಾಡಿನ ಇತಿಹಾಸದಲ್ಲಿ ಅಸಾಮಾನ್ಯ ಶಕ್ತಿಯಿಂದ ಕೂಡಿದ್ದ ಪುರುಷರ ಜತೆಗೆ 500 ವರ್ಷಗಳ ಹಿಂದೆಯೇ, ಸಾಮಾನ್ಯ ಹೆಣ್ಣಿನೊಳಗಿನ ಅಸಾಮಾನ್ಯ ಶಕ್ತಿಯಾಗಿದ್ದ ದೇಯಿ ಬೈದೆತಿ ಕೂಡಾ ಒಬ್ಬಾಕೆ. ಇಂತಹ ಸಾಮಾನ್ಯ ಹೆಣ್ಣೊಬ್ಬಳ ಅಸಾಮಾನ್ಯ ಶಕ್ತಿಯನ್ನು ಪ್ರೇಕ್ಷಕರ ಮನ ತಟ್ಟುವಂತೆ ಚಿತ್ರಕಥೆಯನ್ನು ನಿರೂಪಿಸುವಲ್ಲಿ ಯಶಸ್ವಿಯಾಗಿದೆ ‘ದೇಯಿ ಬೈದೆತಿ’ ತುಳು ಚಲನಚಿತ್ರ.
ಆಚರಣೆ, ಸಂಪ್ರದಾಯಗಳ ಹೆಸರಿನಲ್ಲಿ ಹೆಣ್ಣು ಮಕ್ಕಳು ಅದೆಷ್ಟೋ ತಲೆಮಾರುಗಳ ಹಿಂದೆಯೂ ಎದುರಿಸಬೇಕಾಗಿದ್ದ ಶೋಷಣೆ, ಹೆತ್ತವರ ಅಸಹಾಯಕತೆ, ಇಲ್ಲಿನ ಮೂಲನಿವಾಸಿಗಳು ಎದುರಿಸುತ್ತಿದ್ದ ಅಸ್ಪೃಶ್ಯತೆಯ ದೃಶ್ಯಗಳನ್ನು ದೇಯಿ ಬೈದೆತಿ ಚಿತ್ರದ ಮೂಲಕ ಅತ್ಯಂತ ಸೂಕ್ಷ್ಮ ಹಾಗೂ ಮನಸ್ಸನ್ನು ಸ್ಪರ್ಶಿಸುವ ರೀತಿಯಲ್ಲಿ ಪ್ರೇಕ್ಷಕರನ್ನು ಚಿತ್ರದುದ್ದಕ್ಕೂ ಹಿಡಿದಿಟ್ಟುಕೊಳ್ಳುವಲ್ಲಿ ತಮ್ಮ ಪ್ರಥಮ ನಿರ್ದೇಶನದ ಪ್ರಯತ್ನದಲ್ಲಿಯೇ ಯಶಸ್ವಿಯಾಗಿದ್ದಾರೆ ನಿರ್ದೇಶಕ, ನಿರ್ಮಾಪಕ ಸೂರ್ಯೋದಯ್ ಪೆರಂಪಳ್ಳಿ.
 ಸುಮಾರು 500 ವರ್ಷಗಳ ಹಿಂದಿನ ಚಿತ್ರಣಕ್ಕೆ ತಕ್ಕುದಾದ ಪರಿಸರ, ಜನಪದ ಶೈಲಿ, ತುಳುನಾಡಿನಲ್ಲಿ ಅಂದೂ ಬದುಕಿನ ಪ್ರಮುಖ ಭಾಗವಾಗಿದ್ದ ಭೂತಾರಾಧನೆ, ಆಚಾರ ವಿಚಾರ, ಸಂಪ್ರದಾಯದ ಹೆಸರಿನಲ್ಲಿ ನಡೆಯುತ್ತಿದ್ದ ಶೋಷಣೆಯನ್ನು ಇಂದಿನ ಆಧುನಿಕತೆಯು ಯಾವೊಂದು ರೀತಿಯಲ್ಲಿಯೂ ಸೋಂಕದಂತೆ ಪ್ರೇಕ್ಷಕರ ಮುಂದಿಡುವಲ್ಲಿ ಚಿತ್ರ ತಂಡ ಮಾಡಿದ ಪ್ರಯತ್ನ ಮೆಚ್ಚುವಂತದ್ದು.
ಪಾಡ್ದನಗಳಲ್ಲಿ ದೈವೀಶಕ್ತಿ ಎಂಬ ನಂಬಿಕೆಯ ದೇಯಿ ಬೈದೆತಿ ಅದು ಹೇಗೆ ಸಾಮಾನ್ಯ ಹೆಣ್ಣು ಮಗಳಾಗಿದ್ದಳು, ಆಕೆಯೊಳಗಿನ ಅಸಾಮಾನ್ಯ ಶಕ್ತಿ ಅದು ಹೇಗೆ ಕಟ್ಟೆಯೊಡೆಯಲು ಸಾಧ್ಯವಾಯಿತು, ಹೆಣ್ಣೊಳಗಿನ ಮಾತೃಹೃದಯ, ತನ್ನವರಿಗಾಗಿ ತನ್ನ ಜೀವನವನ್ನೇ ಮುಡಿಪಾಗಿಡುವ ಸಾಮಾನ್ಯ ಮಹಿಳೆಯೊಳಗಿನ ಅಸಾಮಾನ್ಯ ಶಕ್ತಿಯ ಸಹನಾಶೀಲತೆಯನ್ನು ಅತ್ಯಂತ ಮಾರ್ಮಿಕ ಹಾಗೂ ಮನೋಜ್ಞವಾಗಿ ಚಿತ್ರದಲ್ಲಿ ದೇಯಿ ಬೈದೆತಿಯ ಜೀವನದ ವಿಭಿನ್ನ ಮಜಲುಗಳ ಮೂಲಕ ಕಣ್ಣಿಗೆ ಕಟ್ಟುವಂತೆ ವಿವರಿಸಲಾಗಿದೆ.
ಚಿತ್ರದ ವಿಭಿನ್ನತೆ, ಆಕರ್ಷಣೆಯೇ ಚಿತ್ರದ ನಿರೂಪಣಾ ಶೈಲಿ. ಚಿತ್ರದ ಆರಂಭದಿಂದ ಕೊನೆಯವರೆಗೂ ಪ್ರೇಕ್ಷಕನಲ್ಲಿ ಕುತೂಹಲವನ್ನು ಕೆರಳಿಸುತ್ತಾ ಸಾಗುವ ಚಿತ್ರದ ಪ್ರಥಮಾರ್ಧದಲ್ಲಿ ಸಂಪ್ರದಾಯಗಳ ಹೆಸರಿನಲ್ಲಿ ನಡೆಯುತ್ತಿದ್ದ ಅನಿಷ್ಟ ಆಚರಣೆಗಳ ಸನ್ನಿವೇಶಗಳು ಪ್ರೇಕ್ಷಕರ ಕಣ್ಣುಗಳನ್ನು ತೇವಗೊಳಿಸದಿರದು.
ಮಕ್ಕಳಿಲ್ಲದ ಕೊರಗಿನಲ್ಲಿದ್ದ ಬ್ರಾಹ್ಮಣ ದಂಪತಿಗೆ ನದಿಯ ಬದಿಯಲ್ಲಿ ಮೊಟ್ಟೆಯ ರೂಪದಲ್ಲಿ ಸಿಗುವ ಮಗು ಸ್ವರ್ಣ ಕೇದಗೆಯ ಹೆಸರಿನಲ್ಲಿ ಬೆಳೆದು ದೊಡ್ಡವಳಾಗುತ್ತಾಳೆ. ಆದರೆ, ಮದುವೆಗೆ ಮುಂಚೆ ಬಾಲಕಿ ದೊಡ್ಡವಳಾದರೆ ಸಮಾಜದಲ್ಲಿ ಆ ಹೆಣ್ಣನ್ನು ಸ್ವೀಕರಿಸುವುದು ಮಾತ್ರವಲ್ಲ, ಆಕೆಯ ಹೆತ್ತವರನ್ನೂ ಸಮಾಜ, ಕುಲದಿಂದ ಹೊರ ಹಾಕುವ ಗೊಡ್ಡು ಸಂಪ್ರದಾಯಕ್ಕೆ ಅಂಜಬೇಕಾದಂತಹ ಅಸಹಾಯಕತೆ. ಈ ರೀತಿಯಾಗಿ ತನ್ನ ಪೋಷಕರಿಂದ ದೂರವಾದ ಸ್ವರ್ಣ ಕೇದಿಗೆ, ತನ್ನ ಮೂಲ ಕುಟುಂಬಕ್ಕೆ ಮತ್ತೆ ಸೇರಿ ದೇಯಿಯಾಗಿ ನೋವನ್ನು ಮರೆಯಲು ಪರಂಪಾರಗತ ಕಸುಬಲ್ಲೇ ಪರಿಣಿತಿ ಪಡೆದು ಬೈದೆತಿ ಆಗುವ, ಆ ತನ್ನ ಕಸುಬಿನೊಂದಿಗೆ ಅಸ್ಪಶ್ಯತೆಯ ವಿರುದ್ಧ ಧ್ವನಿ ಎತ್ತುವ ಶಕ್ತಿಯಾಗಿ, ಪರೋಪಕಾರಿಯಾಗಿ ಕಾಣುವ ದೇಯಿ ಬೈದೆತಿ ವಾಸ್ತವದಲ್ಲಿ ಸಾಮಾನ್ಯ ಮಹಿಳೆಯೊಳಗಿನ ಅಸಾಮಾನ್ಯ ಶಕ್ತಿ ಎಂಬುದನ್ನು ಈ ಚಿತ್ರ ಅತ್ಯಂತ ಮನೋಜ್ಞವಾಗಿ ಕಟ್ಟಿಕೊಡುತ್ತದೆ.
ಸ್ವರ್ಣಕೇದಿಗೆಯ ಹುಟ್ಟಿನ ವೈಜ್ಞಾನಿಕ ರಹಸ್ಯ, ದೇಯಿ ಬೈದೆತಿ ಸಾವಿನ ಕುರಿತಾದ ಅನುಮಾನಗಳನ್ನೂ ಅತ್ಯಂತ ಕುತೂಹಲ ರೀತಿಯಲ್ಲಿ ಚಿತ್ರದಲ್ಲಿ ನಿರೂಪಿಸಲಾಗಿದೆ. 3 ಗಂಟೆಗಳ ಈ ಚಿತ್ರಕಥೆಯ ಪಾಡ್ದನ ರೂಪದ ಹಾಡುಗಳು ಕೂಡಾ ತುಳುನಾಡಿನ ಜನಪದದ ಇಂಪನ್ನು ನೀಡುತ್ತದೆ.
ದೇಯಿಬೈದೆತಿ ಪಾತ್ರಕ್ಕೆ ಸೌಜನ್ಯ ಹೆಗ್ಡೆ ನ್ಯಾಯ ಒದಗಿಸಿದ್ದು, ಬ್ರಾಹ್ಮಣ ದಂಪತಿಯಾಗಿ ಸೀತಾ ಕೋಟೆ, ಚೇತನ್ ರೈ ಮಾಣಿ ನಟನೆ ಅದ್ಭುತ. ಉಳಿದಂತೆ ಸಣ್ಣ ಪುಟ್ಟ ಪಾತ್ರಗಳಲ್ಲಿನ ಅಭಿನಯವೂ ಪ್ರೇಕ್ಷಕರ ಮನ ತಣಿಸುವಲ್ಲಿ ಸಫಲವಾಗಿವೆ.
ಚಿತ್ರದ ನಿರೂಪಣಾ ಶೈಲಿ, ಕಥಾಹಂದರ ಚಿತ್ರವನ್ನು ತುಳುನಾಡಿನ ಇತಿಹಾಸವನ್ನು ಮರುಕಳಿಸಿದ ಮತ್ತೊಂದು ತುಳು ಚಿತ್ರವೆಂಬ ಹಿರಿಮೆಯ ಗರಿಯಾದರೆ, ತುಳು ಚಿತ್ರರಂಗದಲ್ಲಿ ಹೊಸ ಪ್ರಯೋಗವೊಂದಕ್ಕೆ ಚಿತ್ರದ ನಿರ್ದೇಶಕರು ಮುನ್ನುಡಿ ಹಾಕಿದ್ದಾರೆ. ತುಳು ಐತಿಹಾಸಿಕ ಘಟನೆಗಳನ್ನು ಈ ರೀತಿಯಾಗಿಯೂ ಪ್ರೇಕ್ಷಕ ಮನ ತಟ್ಟುವ ರೀತಿಯಲ್ಲಿ ತೆರೆದಿಡಬಹುದು, ವೈಭವೀಕರಣಕ್ಕಿಂತಲೂ ಹೆಚ್ಚಾಗಿ ವಾಸ್ತವದ, ಅಚ್ಟುಕಟ್ಟುತನದ ನಿರೂಪಣೆ, ಕುತೂಹಲಕೆರಳಿಸುವ ಕಥಾಹಂದರದ ಮೂಲಕ ಹಿಡಿದಿಟ್ಟುಕೊಳ್ಳಬಹುದು ಎಂಬುದನ್ನು ‘ದೇಯಿ ಬೈದೆತಿ’ ಚಿತ್ರ ತಂಡ ಸಾಬೀತುಪಡಿಸಿದೆ.

Writer - ಸತ್ಯಾ ಕೆ.

contributor

Editor - ಸತ್ಯಾ ಕೆ.

contributor

Similar News