ಶಾಪಿಂಗ್ ಮಾಲ್ ಗೆ ನುಗ್ಗಿದ ಚಿರತೆ!

Update: 2019-02-20 09:51 GMT

ಥಾಣೆ, ಫೆ.20: ಇಲ್ಲಿನ ಶಾಪಿಂಗ್ ಮಾಲ್ ಒಂದರಲ್ಲಿ ಹಾಗೂ ಬಳಿಕ ಹೋಟೆಲ್ ಒಂದರಲ್ಲಿ ಚಿರತೆ ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ ಬಗ್ಗೆ ವರದಿಯಾಗಿದೆ. ಕತ್ತಲಲ್ಲಿ ಕಾರಿಡಾರ್ ‍ನಲ್ಲಿ ಓಡಾಡುವ ಮುನ್ನ ಮೆಟ್ಟಿಲ ಹಿಂಬದಿಯಲ್ಲಿ ಚಿರತೆ ಅಡಗಿಕೊಂಡಿದ್ದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿತ್ತು. ಇದರಿಂದಾಗಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ನಿವಾಸಿಗಳು ಹಾಗೂ ಅಕ್ಕಪಕ್ಕದವರು ಸದ್ಯಕ್ಕೆ ಆ ಪ್ರದೇಶದಲ್ಲಿ ಅಡ್ಡಾಡದಂತೆ ಸೂಚಿಸಲಾಯಿತು.

ಮೊದಲು ಕೋರಂ ಮಾಲ್ ವಾಹನ ನಿಲುಗಡೆ ಪ್ರದೇಶದಲ್ಲಿ ಕಾಣಿಸಿಕೊಂಡ ಚಿರತೆಯನ್ನು ಅಕ್ಕಪಕ್ಕದವರು ಗಮನಿಸಿ ಪೊಲೀಸರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾಗಿ ಸ್ಥಳೀಯ ಸಂಸ್ಥೆಯ ಪ್ರಾದೇಶಿಕ ವಿಕೋಪ ನಿರ್ವಹಣೆ ತಂಡದ ಮುಖ್ಯಸ್ಥ ಸಂತೋಷ್ ಕದಂ ಹೇಳಿದರು.

ತಕ್ಷಣ ಮಾಲ್‍ಗೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಥಾಣೆಯ ಸಮತಾನಗರದಲ್ಲಿದ್ದ ಮಾಲ್‍ಗೆ ಧಾವಿಸಿದರು. ಬಳಿಕ ಎರಡು ಗಂಟೆಗಳ ತೀವ್ರ ಶೋಧ ಕಾರ್ಯಾಚರಣೆ ಬಳಿಕ, ಚಿರತೆ ಕಾಂಪೌಂಡ್ ಹಾರಿ ತಪ್ಪಿಸಿಕೊಂಡಿರಬೇಕು ಎಂಬ ನಿರ್ಧಾರಕ್ಕೆ ಬಂದರು.

ಇದಾದ ಸ್ವಲ್ಪ ಹೊತ್ತಿನಲ್ಲಿ ಪಕ್ಕದ ಮತ್ತೊಂದು ಮಾಲ್ ನ ಬೇಸ್‍ಮೆಂಟ್‍ನಲ್ಲಿ ಕಾಣಿಸಿಕೊಂಡಿದ್ದಾಗಿ ಸ್ಥಳೀಯರು ವಿವರಿಸಿದರು. ಚಿರತೆಯನ್ನು ಕೊನೆಗೂ ಹಿಡಿಯಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News