ಲೋಕಸಭಾ ಚುನಾವಣಾ ಅಖಾಡಕ್ಕಿಳಿದ ಕನ್ಹಯ್ಯ ಕುಮಾರ್

Update: 2019-02-20 15:11 GMT

ಬೆಗುಸರಾಯಿ,ಫೆ.20: ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘಟನೆಯ ಮಾಜಿ ಅಧ್ಯಕ್ಷರಾಗಿರುವ ಕನ್ಹಯ್ಯ ಕುಮಾರ್ 2019ರ ಲೋಕಸಭಾ ಚುನಾವಣೆಯಲ್ಲಿ ಬಿಹಾರದ ಬೆಗುಸರಾಯಿ ಕ್ಷೇತ್ರದಿಂದ ಸಿಪಿಐ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಈ ಕುರಿತು ಸಿಪಿಐನ ಬೆಗುಸರಾಯಿ ವಿಭಾಗ ಈಗಾಗಲೇ ಪ್ರಸ್ತಾವನೆ ಕಳುಹಿಸಿದ್ದು, ಮುಂದಿನ ತಿಂಗಳು ನಡೆಯಲಿರುವ ಪಕ್ಷದ ರಾಜ್ಯ ಕಾರ್ಯಕಾರಿ ಸಭೆಯಲ್ಲಿ ಅನುಮೋದನೆ ಪಡೆದ ನಂತರ ಅಧಿಕೃತ ಘೋಷಣೆ ಮಾಡಲಾಗುವುದು ಎಂದು ವರದಿ ತಿಳಿಸಿದೆ. ಭೂಮಿಹಾರ್ ಸಮುದಾಯದ ಬಾಹುಳ್ಯ ಹೊಂದಿರುವ ಬೆಗುಸರಾಯಿ ಕ್ಷೇತ್ರವನ್ನು ಬಿಹಾರದಲ್ಲಿ ಸಿಪಿಐಯ ಭದ್ರಕೋಟೆಯೆಂದೇ ಪರಿಗಣಿಸಲಾಗಿತ್ತು.

2014ರ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಬಿಜೆಪಿಯ ಭೋಲಾ ಸಿಂಗ್ ಜಯ ಗಳಿಸಿದ್ದರು. ಸಿಂಗ್ ತಮ್ಮ ರಾಜಕೀಯ ಜೀವನವನ್ನು ಸಿಪಿಐ ಕಾರ್ಯಕರ್ತನಾಗಿ ಆರಂಭಿಸಿದ್ದರು. ಈ ಚುನಾವಣೆಯಲ್ಲಿ ಸಿಪಿಐಯ ರಾಜೇಂದ್ರ ಪ್ರಸಾದ್ ಸಿಂಗ್ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಕನ್ಹಯ್ಯ ಕುಮಾರ್ ರಾಜಕೀಯ ಪ್ರವೇಶ ಭಾರತೀಯ ಕಮ್ಯುನಿಸ್ಟ್ ಪಕ್ಷವನ್ನು ರಾಜಕೀಯ ಮುಖ್ಯವಾಹಿನಿಗೆ ತರಲಿದೆ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News