ಬ್ರಿಟನ್: ‘ಕೃತಕ ಬುದ್ಧಿಮತ್ತೆ’ ಕೋರ್ಸ್‌ಗಳು ಭಾರತೀಯರಿಗೆ ಮುಕ್ತ

Update: 2019-02-21 18:18 GMT

ಲಂಡನ್, ಫೆ. 21: ಬ್ರಿಟನ್‌ನ ಸ್ನಾತಕೋತ್ತರ ವಿಶ್ವವಿದ್ಯಾನಿಲಯಗಳು ನೀಡುವ ‘ಕೃತಕ ಬುದ್ಧಿಮತ್ತೆ’ (ಆರ್ಟಿಫಿಶಲ್ ಇಂಟಲಿಜನ್ಸ್) ವಿಷಯದಲ್ಲಿನ ಕೋರ್ಸ್‌ಗಳ ಫೆಲೋಶಿಪ್‌ಗಾಗಿ ಭಾರತೀಯ ವಿದ್ಯಾರ್ಥಿಗಳು ಮತ್ತು ಪರಿಣತರು ಇನ್ನು ಅರ್ಜಿ ಸಲ್ಲಿಸಬಹುದಾಗಿದೆ.

ಕೃತಕ ಬುದ್ಧಿಮತ್ತೆಯಲ್ಲಿನ ಪರಿಣತಿ ಕೊರತೆಯನ್ನು ತುಂಬಲು ಸರಕಾರ ಮತ್ತು ಉದ್ಯಮವು ಜಾರಿಗೆ ತಂದಿರುವ ಮಹತ್ವದ ಕಾರ್ಯಕ್ರಮದ ಭಾಗವಾಗಿ ಈ ಕೊಡುಗೆ ನೀಡಲಾಗಿದೆ.

ಬ್ರಿಟನ್ ಸರಕಾರದ 110 ಮಿಲಿಯ ಪೌಂಡ್ (ಸುಮಾರು 1022 ಕೋಟಿ ರೂಪಾಯಿ) ಪ್ಯಾಕೇಜ್‌ನ ಪ್ರಕಾರ, ವಿವಿಧ ವಿಶ್ವವಿದ್ಯಾನಿಲಯಗಳು ಸ್ನಾತಕೋತ್ತರ ಮಟ್ಟದಲ್ಲಿ ಕೃತಕ ಬುದ್ಧಿಮತ್ತೆ ಕಲಿಕೆಗೆ 200 ಸೀಟ್‌ಗಳನ್ನು ಒದಗಿಸುತ್ತವೆ. ಈ ವಿಶ್ವವಿದ್ಯಾನಿಲಯಗಳಿಗೆ ಡೀಪ್‌ಮೈಂಡ್, ಕ್ವಾಂಟಮ್‌ಬ್ಲಾಕ್, ಸಿಸ್ಕೊ, ಬಿಎಇ ಸಿಸ್ಟಮ್ಸ್ ಮತ್ತು ಭಾರತದ ಮಾಹಿತಿ ತಂತ್ರಜ್ಞಾನ ಸಂಸ್ಥೆ ಇನ್‌ಫೋಸಿಸ್ ಮುಂತಾದ ಉದ್ದಿಮೆಗಳು ದೇಣಿಗೆ ನೀಡುತ್ತವೆ.

ಈ ಕಾರ್ಯಕ್ರಮದ ಫೆಲೋಶಿಪ್‌ಗಳು ಮತ್ತು ಸೀಟ್‌ಗಳನ್ನು ಭಾರತ ಹಾಗೂ ಐರೋಪ್ಯ ಒಕ್ಕೂಟಕ್ಕೆ ಸೇರದ ಇತರ ದೇಶಗಳ ವಿದ್ಯಾರ್ಥಿಗಳು ಮತ್ತು ಪರಿಣತರಿಗೆ ಮುಕ್ತವಾಗಿರುತ್ತವೆ ಎಂದು ಬ್ರಿಟನ್‌ನ ಡಿಜಿಟಲ್, ಮಾಧ್ಯಮ, ಸಂಸ್ಕೃತಿ ಮತ್ತು ಕ್ರೀಡಾ ಇಲಾಖೆಯ ವಕ್ತಾರರೊಬ್ಬರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News