ನೀವು ನಿರ್ವಹಿಸದ ನಿಮ್ಮ ಬ್ಯಾಂಕ್ ಖಾತೆಗಳನ್ನು ಮುಚ್ಚಲು ನಾಲ್ಕು ಕಾರಣಗಳಿಲ್ಲಿವೆ.....

Update: 2019-02-22 13:41 GMT

ಬ್ಯಾಂಕಿಂಗ್ ಸೇವೆಗಳ ವಿಸ್ತರಣೆಯಿಂದಾಗಿ ಮಧ್ಯಮ ಮತ್ತು ಮೇಲ್ವರ್ಗಗಳ ಹೆಚ್ಚಿನ ಜನರು ಇಂದು ಒಂದಕ್ಕಿಂತ ಹೆಚ್ಚಿನ ಬ್ಯಾಂಕ್ ಉಳಿತಾಯ ಖಾತೆ(ಎಸ್‌ಬಿ)ಗಳನ್ನು ಹೊಂದಿದ್ದಾರೆ. ಹೆಚ್ಚಿನ ಬ್ಯಾಂಕ್ ಖಾತೆಗಳು ಹಿಂದಿನ ಉದ್ಯೋಗಗಳ ಪಳೆಯುಳಿಕೆಗಳಾಗಿದ್ದರೆ,ಇತರ ಖಾತೆಗಳು ಉತ್ತಮ ಸೌಲಭ್ಯ,ನಗದು ನಿರ್ವಹಣೆ ಮತ್ತು ಗ್ರಾಹಕ ಸೇವೆಗಳಿಗಾಗಿ ತೆರೆಯಲ್ಪಟ್ಟಿರುತ್ತವೆ. ಆದರೆ ಕಾಲಕ್ರಮೇಣ ಗ್ರಾಹಕರು ಹೆಚ್ಚುವರಿ ಎಸ್‌ಬಿ ಖಾತೆಗಳನ್ನು ನಿರ್ವಹಿಸುವ ಗೋಜಿಗೆ ಹೋಗುವುದಿಲ್ಲ,ಹೀಗಾಗಿ ಅವುಗಳಲ್ಲಿರುವ ದುಡ್ಡೂ ಬ್ಯಾಂಕಿನ ಶುಲ್ಕಗಳಿಗೆ ಹೋಗುತ್ತದೆ. ಅಂತಿಮವಾಗಿ ನಷ್ಟವಾಗುವುದು ಗ್ರಾಹಕರಿಗೇ.

ನೀವು ನಿರ್ವಹಿಸದಿರುವ ಎಸ್‌ಬಿ ಖಾತೆಗಳನ್ನು ಏಕೆ ಮುಚ್ಚಬೇಕು ಎನ್ನುವುದಕ್ಕೆ ನಾಲ್ಕು ಪ್ರಮುಖ ಕಾರಣಗಳಿಲ್ಲಿವೆ...

►ಮಾಸಿಕ ಸರಾಸರಿ ಶಿಲ್ಕು ಅಗತ್ಯದ ಪಾಲನೆ

 ಮಾಸಿಕ ಸರಾಸರಿ ಶಿಲ್ಕು ಅಥವಾ ಕನಿಷ್ಠ ಸರಾಸರಿ ಶಿಲ್ಕು(ಎಂಎಬಿ) ನಿಯಮವು ಬ್ಯಾಂಕುಗಳ ಪಾಲಿಗೆ ಚಿನ್ನದ ಮೊಟ್ಟೆಯಿಡುವ ಕೋಳಿಯಂತಾಗಿದೆ. ಬ್ಯಾಂಕುಗಳನ್ನು ಆಧರಿಸಿ ಎಂಎಬಿ 500 ರೂ.ನಿಂದ ಎರಡು ಲ.ರೂ.ವರೆಗೂ ಇರಬಹುದು. ಶೂನ್ಯ ಶಿಲ್ಕಿನ ವೇತನ ಖಾತೆಗಳು ಸಹ ಸತತ ಮೂರು ತಿಂಗಳಿಗೆ ವೇತನ ಜಮೆಯಾಗದಿದ್ದರೆ ರೆಗ್ಯುಲರ್ ಎಸ್‌ಬಿ ಖಾತೆಗಳಾಗಿ ಪರಿವರ್ತನೆಗೊಳ್ಳುತ್ತವೆ ಮತ್ತು ಆ ಬಳಿಕ ಈ ಖಾತೆಗಳಲ್ಲಿಯೂ ಎಂಎಬಿಯನ್ನು ಕಾಯ್ದುಕೊಳ್ಳಬೇಕಾಗುತ್ತದೆ. ನೀವು ಹೆಚ್ಚು ಎಸ್‌ಬಿ ಖಾತೆಗಳನ್ನು ಹೊಂದಿದ್ದರೆ ಎಲ್ಲದರಲ್ಲಿಯೂ ಎಂಎಬಿಯನ್ನು ಕಾಯ್ದುಕೊಳ್ಳಬೇಕಾಗುತ್ತದೆ. ಹೆಚ್ಚಿನವರಿಗೆ ಇದು ಕಷ್ಟವಾಗುತ್ತದೆ. ಖಾತೆಯಲ್ಲಿ ಎಂಎಬಿ ಕಾಯ್ದುಕೊಳ್ಳದಿದ್ದರೆ ಬ್ಯಾಂಕುಗಳು ಮಾಸಿಕ 450 ರೂ.ವರೆಗೂ ಶುಲ್ಕವನ್ನು ವಿಧಿಸುತ್ತವೆ. ಇದಕ್ಕಾಗಿ ಅವು ಗ್ರಾಹಕರನ್ನು ಕೇಳುವುದೂ ಇಲ್ಲ,ನೇರವಾಗಿ ಖಾತೆಯಿಂದ ಶುಲ್ಕವನ್ನು ಕಡಿತಗೊಳಿಸುತ್ತವೆ.

►ಎಸ್‌ಬಿ ಖಾತೆಗೆ ಸಂಬಂಧಿಸಿದ ಶುಲ್ಕಗಳು ಕಡಿತಗೊಳ್ಳುತ್ತಲೇ ಇರುತ್ತವೆ

 ಎಸ್‌ಬಿ ಖಾತೆಗಳಿಗೆ ಯಾವುದೇ ವಾರ್ಷಿಕ ನಿರ್ವಹಣೆ ಶುಲ್ಕಗಳಿಲ್ಲವಾದರೂ ಅವುಗಳೊಂದಿಗೆ ಜೋಡಣೆಗೊಂಡಿರುವ ಡೆಬಿಟ್ ಕಾರ್ಡ್‌ಗಳು ಹೆಚ್ಚಾಗಿ ವಾರ್ಷಿಕ ಶುಲ್ಕಗಳೊಂದಿಗೇ ಬರುತ್ತವೆ ಮತ್ತು ಈ ಶುಲ್ಕವನ್ನು ನೇರವಾಗಿ ಎಸ್‌ಬಿ ಖಾತೆಯಿಂದ ಕಡಿತಗೊಳಿಸಲಾಗುತ್ತದೆ. ಹೀಗೆ ನೀವು ಸುಮ್ಮನೆ ಬಿದ್ದುಕೊಂಡಿರುವ ನಿಮ್ಮ ಎಸ್‌ಬಿ ಖಾತೆಯ ಡೆಬಿಟ್ ಕಾರ್ಡ್‌ನ್ನು ಬಳಸದಿದ್ದರೂ ನಿಮಗೆ ವಾರ್ಷಿಕ ಶುಲ್ಕವನ್ನು ವಿಧಿಸಲಾಗುತ್ತದೆ. ಈ ಶುಲ್ಕ ವರ್ಷಕ್ಕೆ 100 ರೂ.ಗಳಿಂದ ಹಿಡಿದು 1,000 ರೂ.ಗೂ ಹೆಚ್ಚಿರಬಹುದು ಮತ್ತು ಇದು ಹೆಚ್ಚಿನವರು ತಮ್ಮ ನಿಷ್ಕ್ರಿಯ ಎಸ್‌ಬಿ ಖಾತೆಯಲ್ಲಿ ಗಳಿಸುವ ಬಡ್ಡಿಯನ್ನೂ ಮೀರಬಹುದು. ಡೆಬಿಟ್ ಕಾರ್ಡ್ ಶುಲ್ಕ ಕಡಿತದಿಂದ ನಿಮ್ಮ ಖಾತೆಯ ಎಂಎಬಿಗೆ ಕೊರತೆಯಾದರೆ ಅದನ್ನು ಕಾಯ್ದುಕೊಳ್ಳದಿದ್ದಕ್ಕೆ ಶುಲ್ಕವೂ ನಿಮ್ಮ ಖಾತೆಯಿಂದ ಕಡಿತಗೊಳ್ಳಲು ಆರಂಭವಾಗುತ್ತದೆ.

ವಾರ್ಷಿಕ ಡೆಬಿಟ್ ಕಾರ್ಡ್ ಶುಲ್ಕದ ಜೊತೆಗೆ ಪ್ರತಿ ತ್ರೈಮಾಸಿಕಕ್ಕೆ 30 ರೂ.ವರೆಗೆ ಮೌಲ್ಯವರ್ಧಿತ ಎಸ್‌ಎಂಎಸ್ ಅಲರ್ಟ್ ಶುಲ್ಕವನ್ನೂ ಬ್ಯಾಂಕುಗಳು ವಿಧಿಸುತ್ತವೆ.

►ಪರ್ಯಾಯ ಹೂಡಿಕೆಗಳಿಗಿಂತ ಕಡಿಮೆ ಪ್ರತಿಫಲ

ನೀವು ಬಳಸದೆ ಹಾಗೆಯೇ ಬಿಟ್ಟಿರುವ ಎಸ್‌ಬಿ ಖಾತೆಯಲ್ಲಿನ ಹಣಕ್ಕೆ ಸಿಗುವ ಪ್ರತಿಫಲವು ಇತರ ಹೂಡಿಕೆಗಳಿಗೆ ಹೋಲಿಸಿದರೆ ತೀರ ಅಲ್ಪವಾಗಿರುತ್ತದೆ. ಹೆಚ್ಚಿನ ಬ್ಯಾಂಕುಗಳು ಎಸ್‌ಬಿ ಖಾತೆಗಳ ಮೇಲೆ ವಾರ್ಷಿಕ ಶೇ.3.5ರಿಂದ 4ರಷ್ಟು ಪ್ರತಿಫಲವನ್ನು ನೀಡುತ್ತವೆ. ಕೆಲವೇ ಬ್ಯಾಂಕುಗಳು ಖಾತೆಯಲ್ಲಿ ಕಾಯ್ದುಕೊಂಡಿರುವ ಶಿಲ್ಕನ್ನು ಅವಲಂಬಿಸಿ ವಾರ್ಷಿಕ ಶೇ.6.5ರವರೆಗೆ ಪ್ರತಿಫಲವನ್ನು ನೀಡಬಹುದು. ಅದೇ ನಿರಖು ಠೇವಣಿಯಲ್ಲಿ ವಾರ್ಷಿಕ ಶೇ.9ರವರೆಗೆ ಪ್ರತಿಫಲ ದೊರೆಯುತ್ತದೆ. ಮೂಚ್ಯುವಲ್ ಫಂಡ್‌ಗಳಾದರೆ ವಾರ್ಷಿಕ ಶೇ.5ರಿಂದ ಶೇ.15ರವರೆಗೂ ಪ್ರತಿಫಲವನ್ನು ನೀಡುತ್ತವೆ.

►ಡಾರ್ಮಂಟ್ ಅಥವಾ ನಿಷ್ಕ್ರಿಯ ಖಾತೆಯಾಗಿ ಪರಿವರ್ತನೆ

ಗ್ರಾಹಕರು ತಮ್ಮ ಎಸ್‌ಬಿ ಖಾತೆಯಲ್ಲಿ ಸತತ 12 ತಿಂಗಳುಗಳ ಕಾಲ ಯಾವುದೇ ವಹಿವಾಟು ನಡೆಸದಿದ್ದರೆ ಬ್ಯಾಂಕು ಅದನ್ನು ನಿಷ್ಕ್ರಿಯ ಖಾತೆಯನ್ನಾಗಿ ವರ್ಗೀಕರಿಸುತ್ತದೆ. ನಂತರದ 12 ತಿಂಗಳು ಕಾಲವೂ ಯಾವುದೇ ವಹಿವಾಟು ನಡೆಸದಿದ್ದರೆ ಅದನ್ನು ಡಾರ್ಮಂಟ್/ಇನ್‌ಆಪರೇಟಿವ್ ಖಾತೆಯನ್ನಾಗಿ ಮರುವರ್ಗೀಕರಿಸಲಾಗುತ್ತದೆ. ನಿಷ್ಕ್ರಿಯ ಖಾತೆಗಳಲ್ಲಿ ವಹಿವಾಟು ನಡೆಸುವುದನ್ನು ಬ್ಯಾಂಕುಗಳು ನಿರ್ಬಂಧಿಸದಿದ್ದರೂ ಅವು ಪುನಃ ಸಕ್ರಿಯಗೊಳ್ಳುವವರೆಗೂ ನೆಟ್ ಬ್ಯಾಂಕಿಂಗ್,ಎಟಿಎಂ ವಹಿವಾಟು,ಫೋನ್ ಬ್ಯಾಂಕಿಂಗ್ ಮತ್ತು ಥರ್ಡ್ ಪಾರ್ಟಿ ನಗದು ವಹಿವಾಟುಗಳನ್ನು ನಡೆಸಲು ಗ್ರಾಹಕರಿಗೆ ಬ್ಯಾಂಕುಗಳು ಅವಕಾಶ ನೀಡುವುದಿಲ್ಲ. ಅಲ್ಲದೆ ಡಾರ್ಮಂಟ್ ಖಾತೆಗಳ ಪ್ರಕರಣಗಳಲ್ಲಿ ಚೆಕ್‌ಬುಕ್,ಡೆಬಿಟ್ ಕಾರ್ಡ್,ವಿಳಾಸ ಬದಲಾವಣೆಯಂತಹ ಕೋರಿಕೆಗಳನ್ನೂ ಬ್ಯಾಂಕುಗಳು ನಿರಾಕರಿಸಬಹುದು.

ನಿಷ್ಕ್ರಿಯ ಖಾತೆಯನ್ನು ಪುನರ್ ಕ್ರಿಯಾಶೀಲಗೊಳಿಸಲು ಗ್ರಾಹಕನಿಂದ ಅಥವಾ ಥರ್ಡ್‌ಪಾರ್ಟಿಯಿಂದ ನಡೆಯುವ ವಹಿವಾಟು ಸಾಕು. ಆದರೆ ಡಾರ್ಮಂಟ್ ಖಾತೆಯನ್ನು ಕ್ರಿಯಾಶೀಲಗೊಳಿಸಲು ಗ್ರಾಹಕನು ತನ್ನ ಮೂಲ ಶಾಖೆಗೆ ಹೊಸದಾಗಿ ಕೆವೈಸಿ ದಾಖಲೆಗಳೊಂದಿಗೆ ಲಿಖಿತ ಕೋರಿಕೆಯನ್ನು ಸಲ್ಲಿಸಬೇಕಾಗುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಗ್ರಾಹಕ 24 ತಿಂಗಳುಗಳವರೆಗೂ ತನ್ನ ಎಸ್‌ಬಿ ಖಾತೆಯನ್ನು ಬಳಸಲಿಲ್ಲವೆಂದರೆ ಅದು ಆತನಿಗೆ ಅಷ್ಟೇನೂ ಉಪಯೋಗಿಯಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಹೀಗಾಗಿ ಅಂತಹ ಖಾತೆಯನ್ನು ಮುಚ್ಚುವುದೇ ಒಳ್ಳೆಯದು.

 ಒಟ್ಟಾರೆಯಾಗಿ ಹೇಳಬೇಕೆಂದರೆ ಹಲವಾರು ಎಸ್‌ಬಿ ಖಾತೆಗಳನ್ನು ಹೊಂದಿರುವುದರಿಂದ ಹೆಚ್ಚಿನ ಆಯ್ಕೆಗಳು,ಉತ್ತಮ ನಗದು ನಿರ್ವಹಣೆ,ಹೆಚ್ಚು ರಿಯಾಯಿತಿಗಳು,ಕ್ಯಾಷ್ ಬ್ಯಾಕ್,ವೋಚರ್ಸ್ ಇತ್ಯಾದಿಗಳ ರೂಪದಲ್ಲಿ ಲಾಭಗಳನ್ನು,ಅಷ್ಟೇ ಏಕೆ,ವಿವಿಧ ವಹಿವಾಟು ಸಂಬಂಧಿ ಮಿತಿಗಳ ಗರಿಷ್ಠ ಬಳಕೆಯ ಮೂಲಕ ಕಡಿಮೆ ಶುಲ್ಕದ ಲಾಭವನ್ನೂ ಪಡೆದುಕೊಳ್ಳಬಹುದು. ಆದರೆ ಬಳಕೆಯಲ್ಲಿಲ್ಲದ ಅಥವಾ ಕಳಪೆ ವೈಶಿಷ್ಟಗಳುಳ್ಳ ಎಸ್‌ಬಿ ಖಾತೆಗಳನ್ನು ಮುಂದುವರಿಸುವುದು ನಷ್ಟಕ್ಕೆ ಕಾರಣವಾಗುವುದರಿಂದ ಅವುಗಳನ್ನು ಮುಚ್ಚಿಬಿಡುವುದು ಒಳ್ಳೆಯದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News