ಪಿಸ್ತೂಲ್ ಸ್ಪರ್ಧೆಯ ಒಲಿಂಪಿಕ್ ಅರ್ಹತಾ ಸ್ಥಾನಮಾನ ರದ್ದು

Update: 2019-02-22 18:51 GMT

ಹೊಸದಿಲ್ಲಿ, ಫೆ.22: ಐಎಸ್‌ಎಸ್‌ಎಫ್ ವಿಶ್ವಕಪ್ ಶೂಟಿಂಗ್‌ನಲ್ಲಿ ಭಾಗವಹಿಸಲು ಪಾಕಿಸ್ತಾನದ ಮೂವರಿಗೆ ಭಾರತ ವೀಸಾ ನೀಡದಿರುವುದನ್ನು ಮುಂದಿಟ್ಟುಕೊಂಡು ಅಂತರ್‌ರಾಷ್ಟ್ರೀಯ ಒಲಿಂಪಿಕ್ ಸಮಿತಿಯು(ಐಒಸಿ) ಭಾರತದಲ್ಲಿ ನಡೆಯುವ ಪುರುಷರ 25 ಮೀ. ರ್ಯಾಪಿಡ್ ಫೈರ್ ಪಿಸ್ತೂಲ್ ಸ್ಪರ್ಧೆಗೆ ಒಲಿಂಪಿಕ್ ಅರ್ಹತಾ ಸ್ಥಾನಮಾನವನ್ನು(ಭಾರತದ ಪಾಲಿನ ಎರಡು ಕೋಟಾಗಳು) ನಿರ್ಬಂಧಿಸಿದೆ.

ಪಾಕಿಸ್ತಾನದ ಶೂಟರ್‌ಗಳಾದ ಮುಹಮ್ಮದ್ ಖಲೀಲ್ ಅಖ್ತರ್ ಹಾಗೂ ಗುಲಾಮ್ ಮುಸ್ತಫಾ ಬಶೀರ್ ಮತ್ತು ಓರ್ವ ಅಧಿಕಾರಿ ಫೆ.20-29ರವರೆಗೆ ದಿಲ್ಲಿಯಲ್ಲಿ ನಡೆಯುವ ಡಾ. ಕರ್ಣಿಸಿಂಗ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಬೇಕಾಗಿತ್ತು.

‘‘ಪಾಕಿಸ್ತಾನದ ಸ್ಪರ್ಧಿಗಳು ಭಾಗವಹಿಸಬೇಕಾಗಿದ್ದ ರ್ಯಾಪಿಡ್ ಫೈರ್ ಪಿಸ್ತೂಲ್ ಸ್ಪರ್ಧೆಯನ್ನು ಮಾತ್ರ ಒಲಿಂಪಿಕ್ ಅರ್ಹತಾ ಟೂರ್ನಿಯಾಗಿ ರದ್ದುಪಡಿಸುವುದಕ್ಕೆ ಐಒಸಿ ಸೀಮಿತಗೊಳಿಸಿದೆ. ಬೇರೆ ಬೇರೆ ಸ್ಪರ್ಧೆಗಳಲ್ಲಿ ಭಾಗವಹಿಸಲು 61 ದೇಶಗಳಿಂದ 500 ಸ್ಫರ್ಧಿಗಳು ಈಗಾಗಲೇ ಭಾರತದಲ್ಲಿರುವುದರಿಂದ ಅವರ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ’’ ಎಂದು ಐಒಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಒಲಿಂಪಿಕ್ ಕಾಯ್ದೆಯ ಪ್ರಕಾರ ಎಲ್ಲ ಕ್ರೀಡಾಪಟುಗಳಿಗೆ ಪ್ರವೇಶವನ್ನು ಖಚಿತಪಡಿಸಲು ಸರಕಾರದಿಂದ ಲಿಖಿತ ಭರವಸೆ ಪಡೆಯುವವರೆಗೂ ಭಾರತಕ್ಕೆ ಒಲಿಂಪಿಕ್ ಸಂಬಂಧಿತ ಟೂರ್ನಿಗಳನ್ನು ಆಯೋಜಿಸಲು ಅವಕಾಶ ಮಾಡಿಕೊಡುವುದಿಲ್ಲ ಹಾಗೂ ಈ ಕುರಿತು ಭಾರತದೊಂದಿಗಿನ ಎಲ್ಲ ಮಾತುಕತೆಗಳನ್ನು ನಿಲ್ಲಿಸಲಾಗುವುದು ಎಂದು ಐಒಸಿ ಹೇಳಿದೆ.

‘‘2020ರ ಒಲಿಂಪಿಕ್ಸ್ ಗೇಮ್‌ಗೆ ನಿಗದಿಪಡಿಸಲಾಗಿದ್ದ ಎಲ್ಲ 16 ಒಲಿಂಪಿಕ್ ಕೋಟಾಗಳನ್ನು ರದ್ದುಪಡಿಸಿ ಅಂತರ್‌ರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ಸ್ ಫೆಡರೇಷನ್(ಐಎಸ್‌ಎಸ್‌ಎಫ್) ಅಧ್ಯಕ್ಷ ವ್ಲಾಡಿಮಿರ್ ಲಾಸನ್ ಹೇಳಿಕೆ ನೀಡಿದ ಬಳಿಕ ಈ ನಿರ್ಧಾರ ಹೊರಬಿದ್ದಿದೆ.

ಶೂಟಿಂಗ್ ವಿಶ್ವಕಪ್‌ನಲ್ಲಿ ಗೆದ್ದ ಪದಕಗಳನ್ನು ಮುಂದಿನ ಒಲಿಂಪಿಕ್ಸ್‌ಗೆ ಪರಿಗಣಿಸಲಾಗುವುದಿಲ್ಲ ಎಂದು ಲಾಸನ್ ಘೋಷಿಸಿದ್ದರು. ಆದರೆ ಪದಕ ಪರಿಗಣನೆಯಲ್ಲಿ ಎರಡಕ್ಕೆ ತಡೆಹಿಡಿಯುವ ಅವಕಾಶವಿದ್ದು 14 ಕೋಟಾ ಉಳಿಯಲಿವೆ.

ಒಲಿಂಪಿಕ್ ಸಮಿತಿಯ ಕಾಯ್ದೆಯ ವಿರುದ್ಧವಾಗಿ ಭಾರತ ನಡೆದುಕೊಳ್ಳುತ್ತಿದೆ ಎಂದು ಐಒಸಿ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News