ಕ್ರಿಕೆಟ್ ಆಯ್ಕೆ ಮಂಡಳಿಯ ಇಬ್ಬರ ಅಮಾನತು

Update: 2019-02-22 18:58 GMT

ರಾಂಚಿ, ಫೆ.22: ಆಟಗಾರರ ಆಯ್ಕೆಗಾಗಿ ಹಣ ಸ್ವೀಕರಿಸುವುದನ್ನು ಒಪ್ಪಿಕೊಂಡ ಜಿಲ್ಲಾ ಮಟ್ಟದ ಕ್ರಿಕೆಟ್ ಅಧಿಕಾರಿಬ್ಬಗಳಿಬ್ಬರು ಟಿವಿ ಚಾನೆಲ್‌ವೊಂದರ ಕುಟುಕು ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿದ್ದು ಜಾರ್ಖಂಡ್ ಕ್ರಿಕೆಟ್ ಅಸೋಸಿಯೇಷನ್ ಅವರ ಆಜೀವ ಸದಸ್ಯತ್ವವನ್ನು ರದ್ದು ಮಾಡಿದೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ಅವರನ್ನು ಹುದ್ದೆಯಿಂದ ಕಿತ್ತು ಹಾಕಲಾಗಿದೆ. ರಾಂಚಿ ಜಿಲ್ಲಾ ಕ್ರಿಕೆಟ್ ಸಂಸ್ಥೆ ಹಾಗೂ ಲತೆಹಾರ್ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿಗಳಾದ ಕ್ರಮವಾಗಿ ಎಮ್.ಡಿ. ವಸೀಂ ಹಾಗೂ ಅಮಲೇಶ್ ಕುಮಾರ್ ಕುಟುಕು ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದ ಆರೋಪಿಗಳಾಗಿದ್ದಾರೆ. ಜಿಲ್ಲಾ ತಂಡದಲ್ಲಿ ಹಣಕ್ಕಾಗಿ ಯಾವುದೇ ವಯಸ್ಸಿನ ಆಟಗಾರನನ್ನು ಆಯ್ಕೆ ಮಾಡುವುದಕ್ಕೆ ಇವರಿಬ್ಬರೂ ಒಪ್ಪಿಕೊಂಡಿರುವುದು ಹಿಂದಿ ಚಾನೆಲ್‌ವೊಂದು ನಡೆಸಿದ ಕುಟುಕು ಕಾರ್ಯಾಚರಣೆಯ ವೇಳೆ ಕ್ಯಾಮರಾದಲ್ಲಿ ಸೆರೆಯಾಗಿದೆ. ಹಣದ ಪ್ರಭಾವದಿಂದ ಜಾರ್ಖಂಡ್ ರಾಜ್ಯ ತಂಡಕ್ಕೂ ಸೇರ್ಪಡೆಯಾಗಬಹುದು ಎಂದೂ ಅವರು ಹೇಳಿದ್ದು ವರದಿಯಾಗಿದೆ. ಈ ಸುದ್ದಿ ವೈರಲ್ ಆದ ಬಳಿಕ ಜೆಎಸ್‌ಸಿಎ ಈ ಕ್ರಮ ತೆಗೆದುಕೊಂಡಿದೆ.

‘‘ಈ ಕುರಿತು ತನಿಖೆಗಾಗಿ ಮೂವರು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ. ಮಾ.1ರೊಳಗೆ ಈ ಕುರಿತು ತನಿಖಾ ವರದಿ ಸಲ್ಲಿಸುವಂತೆ ಈ ತಂಡಕ್ಕೆ ತಿಳಿಸಲಾಗಿದೆ’’ ಎಂದು ಜೆಎಸ್‌ಸಿಎ ಕಾರ್ಯದರ್ಶಿ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಕುರಿತು ಸುದ್ದಿಸಂಸ್ಥೆಯೊಂದರ ಜೊತೆ ಮಾತನಾಡಿರುವ ರಾಂಚಿ ಜಿಲ್ಲಾ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿ ಎಮ್.ಡಿ. ವಸೀಂ ತಮ್ಮ ಮೇಲಿನ ಆರೋಪವನ್ನು ಅಲ್ಲಗಳೆದಿದ್ದಾರೆ. ‘‘ಸುದ್ದಿ ಸಂಸ್ಥೆಯು ಎಡಿಟ್ ಮಾಡಿದ ವರದಿಯನ್ನು ಬಿತ್ತರಿಸಿದ್ದು, ಎಲ್ಲ ಸಾಕ್ಷಗಳೊಂದಿಗೆ ಶೀಘ್ರ ಹಾಜರಾಗುವೆ’’ ಎಂದಿದ್ದಾರೆ.

             

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News