ಇದು ವಾರದ ಹೋರಾಟವಲ್ಲ; ನಿರ್ಣಾಯಕ ಗೆಲುವು ಬೇಕು: ಅರುಣ್ ಜೇಟ್ಲಿ

Update: 2019-02-23 03:51 GMT

ಹೊಸದಿಲ್ಲಿ, ಫೆ.23: ಪುಲ್ವಾಮಾ ಭಯೋತ್ಪಾದನಾ ದಾಳಿಯ ಬಗ್ಗೆ ಭಾರತ ತೀವ್ರ ಆಕ್ರೋಶ ಹೊಂದಿದೆ. ಉಗ್ರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ವಿಫಲವಾದ ಪಾಕಿಸ್ತಾನದಂಥ ಪುಂಡ ದೇಶಗಳನ್ನು ನಿಭಾಯಿಸಲು ಸರ್ಕಾರ ಎಲ್ಲ ಸಾಧನಗಳನ್ನೂ ಬಳಸಲಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ಎಕನಾಮಿಕ್ ಟೈಮ್ಸ್ ಆಯೋಜಿಸಿದ್ದ ಜಾಗತಿಕ ವ್ಯವಹಾರ ಶೃಂಗದಲ್ಲಿ ಮಾತನಾಡಿದ ಅವರು, "ಪಾಕಿಸ್ತಾನ ಹುಲಿಯ ಮೇಲೆ ಸವಾರಿ ಮಾಡುತ್ತಿದೆ. ಹುಲಿ ತನ್ನದೇ ಸವಾರರನ್ನು ಕೂಡಾ ಬಿಡುವುದಿಲ್ಲ..ಇದು ಒಂದು ವಾರದ ಯುದ್ಧವಲ್ಲ. ವಿಭಿನ್ನ ಆಯಾಮಗಳಲ್ಲಿ ಇದನ್ನು ನಿರ್ವಹಿಸಬೇಕಿದೆ. ನಮಗೆ ನಿರ್ಣಾಯಕ ಗೆಲುವು ದೊರೆಯುವ ರೀತಿಯಲ್ಲಿ ಯುದ್ಧ ನಡೆಸಬೇಕಿದೆ" ಎಂದು ಅಭಿಪ್ರಾಯಪಟ್ಟರು.

ಪುಲ್ವಾಮಾ ದಾಳಿಯಲ್ಲಿ ಪಾಕಿಸ್ತಾನದ ಪಾತ್ರವನ್ನು ನಿರೂಪಿಸಲು ಪುರಾವೆ ನೀಡಿ ಎಂದು ಆಗ್ರಹಿಸಿದ ಇಮ್ರಾನ್ ಖಾನ್ ಹೇಳಿಕೆಯನ್ನು ಟೀಕಿಸಿದ ಅವರು, "ನಿಮ್ಮದೇ ದೇಶದಲ್ಲಿರುವ ವ್ಯಕ್ತಿ ಈ ಘಟನೆಯ ಹೊಣೆ ಹೊತ್ತಿದ್ದಾರೆ. ಹೀಗೆ ತಪ್ಪೊಪ್ಪಿಗೆ ಈಗಾಗಲೇ ಬಂದಿರುವಾಗ, ನಿಮ್ಮದೇ ದೇಶದಲ್ಲಿರುವ ವ್ಯಕ್ತಿ ನಾವಿದನ್ನು ಮಾಡಿದ್ದೇನೆ ಎನ್ನುವಾಗ, ಇನ್ನೇನು ಪುರಾವೆ ಬೇಕು" ಎಂದು ಪ್ರಶ್ನಿಸಿದರು. ಪಾಕಿಸ್ತಾನ ಮೂಲದ ಭಯೋತ್ಪಾದನೆ ವಿರುದ್ಧ ನಿರ್ಣಾಯಕ ಗೆಲುವು ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಪಾಕಿಸ್ತಾನಕ್ಕೆ ನೀಡಿದ್ದ ಪರಮಾಪ್ತ ದೇಶ ಸ್ಥಾನಮಾನವನ್ನು ವಾಪಸ್ ಪಡೆಯಲು ಭದ್ರತೆ ಕುರಿತ ಸಂಪುಟ ಸಮಿತಿ ನಿರ್ಧಾರ ಕೈಗೊಂಡ ಬೆನ್ನಲ್ಲೇ ಜೇಟ್ಲಿ ಈ ಹೇಳಿಕೆ ನೀಡಿರುವುದು ವಿಶೇಷ ಮಹತ್ವ ಪಡೆದಿದೆ. ಇದರ ಜತೆಗೆ ಪಾಕಿಸ್ತಾನದಿಂದ ಆಮದಾಗುವ ವಸ್ತುಗಳ ಮೇಲೆ ಶೇಕಡ 200ರಷ್ಟು ತೆರಿಗೆ ವಿಧಿಸಲಾಗಿದ್ದು, ಪಾಕಿಸ್ತಾನವನ್ನು ವಿಶ್ವಸಂಸ್ಥೆಯಲ್ಲಿ ಏಕಾಂಗಿಯಾಗಿ ಮಾಡುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ.

ಮಾನವ ಮತ್ತು ಆರ್ಥಿಕ ಅಭಿವೃದ್ಧಿ ಸೂಚ್ಯಂಕದಲ್ಲಿ ತೀರಾ ಹಿಂದುಳಿದಿರುವ ಪಾಕಿಸ್ತಾನದ ವಿರುದ್ಧದ ಸಂಘರ್ಷಕ್ಕೆ ಭಾರತಕ್ಕೆ ಹೆಚ್ಚಿನ ಹಣಕಾಸು ಬಲ ಕೂಡಾ ಇದೆ ಎಂದು ಪ್ರತಿಪಾದಿಸಿದರು. ಪಾಕಿಸ್ತಾನವನ್ನು ನೆರೆಯ ಪುಂಡ ರಾಷ್ಟ್ರ ಎಂದು ಬಣ್ಣಿಸಿದ ಅವರು, ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳೇ ಘಟನೆಯ ಹೊಣೆ ಹೊತ್ತಿರುವಾಗ ಮತ್ತೆ ಪುರಾವೆ ಅನಗತ್ಯ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News