ಕುಲ್ಗಾಮ್ ನಲ್ಲಿ ಉಗ್ರರೊಂದಿಗೆ ಗುಂಡಿನ ಚಕಮಕಿ; ಡಿವೈಎಸ್ಪಿಯೊಬ್ಬರು ಹುತಾತ್ಮ, ಇಬ್ಬರು ಉಗ್ರರ ಹತ್ಯೆ

Update: 2019-02-24 13:52 GMT

ಶ್ರೀನಗರ, ಫೆ.24: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್  ಜಿಲ್ಲೆಯ ಟುರಿಗಾಂನಲ್ಲಿ ನಲ್ಲಿ ರವಿವಾರ  ಉಗ್ರರೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಡಿವೈಎಸ್ಪಿಯೊಬ್ಬರು ಹುತಾತ್ಮರಾದರು, ಸೇನಾ ಅಧಿಕಾರಿ ಸೇರಿದಂತೆ ಮೂವರು   ಯೋಧರಿಗೆ  ಗಂಭೀರ ಗಾಯವಾಗಿದೆ. 

ಹುತಾತ್ಮರಾದ  ಡಿವೈಎಸ್ಪಿ ಅಮನ್ ಠಾಕೂರ್  ಜಮ್ಮುವಿನ ಡೋಡಾ ಜಿಲ್ಲೆಯ ನಿವಾಸಿ. ಪತ್ನಿ ಹಾಗೋ ಓರ್ವ ಪುತ್ರನನ್ನು ಅವರು  ಅಗಲಿದ್ದಾರೆ. 2011ರ ಕೆಪಿಎಸ್  ಬ್ಯಾಚ್ ನ ಅಧಿಕಾರಿ  ಅಮನ್ ಠಾಕೂರು ಕಳೆದ ಎರಡು ವರ್ಷಗಳಿಂದ ಉಗ್ರರ ವಿರುದ್ಧ ನಡೆದ ಹಲವು ಕಾರ್ಯಾಚರಣೆಗಳಲ್ಲಿ ಭಾಗವಹಿಸಿದ್ದರು.   ಗಾಯಗೊಂಡಿರುವ ಯೋಧರನ್ನು ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂದರ್ಭದಲ್ಲಿ ಇಬ್ಬರು ಉಗ್ರರನ್ನು ಕೊಲ್ಲಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಉಗ್ರರು ಮನೆಯೊಂದರಲ್ಲಿ ಅಡಗಿಕೊಂಡಿದ್ದಾರೆಂಬ ಖಚಿತ ಮಾಹಿತಿಯ ಮೇರೆಗೆ 34ನೇ ರಾಷ್ಟ್ರೀಯ ರೈಫಲ್ಸ್, ಸಿಆರ್ ಪಿಎಫ್ ಮತ್ತು ಎಸ್ ಓಜಿ  ಜಂಟಿಯಾಗಿ ಕಾರ್ಯಾಚರಣೆ ಕೈಗೊಂಡಿತ್ತು.   ಆಗ ಉಗ್ರರು ಭದ್ರತಾ ಪಡೆಯ ಮೇಲೆ ಗುಂಡು ಹಾರಿಸಿದರು. ಈ ಸಂದರ್ಭದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಡಿವೈಎಸ್ಪಿ ಠಾಕೂರು ಹುತಾತ್ಮರಾದರು.  ಮೃತಪಟ್ಟಿರುವ ಉಗ್ರರ ಗುರುತು ಪತ್ತೆಯಾಗಿಲ್ಲ.    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News