×
Ad

ಅವಳಿ ಮಕ್ಕಳ ಅಪಹರಣ,ಹತ್ಯೆ: ಬಜರಂಗದಳ ನಾಯಕನೇ ರೂವಾರಿ

Update: 2019-02-24 19:41 IST

ಭೋಪಾಲ,ಫೆ.24: ಮಧ್ಯಪ್ರದೇಶದ ಚಿತ್ರಕೂಟದಲ್ಲಿ ಅವಳಿ-ಜವಳಿ ಮಕ್ಕಳ ಅಪಹರಣ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರನ್ನು ಪೊಲೀಸರು ರವಿವಾರ ಬಂಧಿಸಿದ್ದಾರೆ.

ಫೆ.12ರಂದು ಚಿತ್ರಕೂಟದ ನಯಾಗಾಂವ್‌ನಲ್ಲಿ ಶಾಲಾ ಬಸ್‌ಗೆ ನುಗ್ಗಿದ್ದ ದುಷ್ಕರ್ಮಿಗಳು ಪಿಸ್ತೂಲು ತೋರಿಸಿ ಬೆದರಿಕೆಯೊಡ್ಡಿ ಸ್ಥಳೀಯ ಉದ್ಯಮಿಯ ಅವಳಿ-ಜವಳಿ ಮಕ್ಕಳಾದ ಶ್ರೇಯಾಂಶ್ ಮತ್ತು ಪ್ರಿಯಾಂಶ ರಾವತ್ ಅವರನ್ನು ಅಪಹರಿಸಿದ್ದರು. ಒತ್ತೆಹಣವಾಗಿ ಕುಟುಂಬವು ಈಗಾಗಲೇ ಅಪಹರಣಕಾರರಿಗೆ 20 ಲ.ರೂ.ಗಳನ್ನು ನೀಡಿತ್ತು. ಆದರೆ ಅವರು ತಮ್ಮ ಬೇಡಿಕೆಯನ್ನು ಒಂದು ಕೋ.ರೂ.ಗೆ ಹೆಚ್ಚಿಸಿದ್ದರು. ಫೆ.21ರಂದು ಮಕ್ಕಳ ಹತ್ಯೆ ನಡೆದಿತ್ತೆನ್ನಲಾಗಿದ್ದು,ರವಿವಾರ ಬೆಳಿಗ್ಗೆ ಉತ್ತರ ಪ್ರದೇಶದ ಬಂಡಾದಲ್ಲಿ ನದಿಯಲ್ಲಿ ತೇಲುತ್ತಿದ್ದ ಶವಗಳು ಪತ್ತೆಯಾಗಿವೆ. ಇದರ ಬೆನ್ನಲ್ಲೇ ಚಿತ್ರಕೂಟದಲ್ಲಿ ಭಾರೀ ಪ್ರತಿಭಟನೆಗಳು ನಡೆದಿದ್ದು,ಪೊಲೀಸರು ಆರು ಆರೋಪಿಗಳನ್ನು ಬಂಧಿಸಿದ್ದಾರೆ.

ಅಪಹರಣ ಮತ್ತು ಹತ್ಯೆಯ ಹಿಂದಿನ ರೂವಾರಿ ವಿಷ್ಣುಕಾಂತ ಶುಕ್ಲಾ ಎಂಬಾತ ಸ್ಥಳೀಯ ಬಜರಂಗ ದಳ ನಾಯಕನಾಗಿದ್ದಾನೆ,ಆದರೆ ಅಪರಾಧದಲ್ಲಿ ನೇರವಾಗಿ ಭಾಗವಹಿಸಿರಲಿಲ್ಲ. ಆತನ ಹಿರಿಯ ಸೋದರ ಪದಮ್ ಶುಕ್ಲಾ ಎಂಬಾತ ಪ್ರಮುಖ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದರು.

ನಂಬರ್ ಪ್ಲೇಟ್‌ನಲ್ಲಿ ‘ರಾಮರಾಜ್ಯ’ ಎಂದು ಬರೆಯಲಾಗಿದ್ದ ಬೈಕ್ ಮತ್ತು ಬಿಜೆಪಿ ಧ್ವಜವನ್ನು ಹೊಂದಿದ್ದ ಕಾರನ್ನು ಕೃತ್ಯಕ್ಕೆ ಬಳಸಲಾಗಿತ್ತು ಎಂದೂ ಪೊಲಿಸರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News