ಮಾಸಿಕ 500 ರೂ.ರೈತರಿಗೆ ಅವಮಾನ: ಮಾಯಾವತಿ
ಲಕ್ನೋ,ಫೆ.24: ಪಿಎಂ-ಕಿಸಾನ್ ಯೋಜನೆಯು ರೈತರಿಗೆ ಮಾಡುತ್ತಿರುವ ಅವಮಾನವಾಗಿದೆ ಎಂದು ರವಿವಾರ ಬಣ್ಣಿಸಿರುವ ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ ಅವರು,ಬಿಜೆಪಿಯು ಸಾರ್ವತ್ರಿಕ ಚುನಾವಣೆಗಳಿಗೆ ಮುನ್ನ ಅವರ ಕಣ್ಣಿಗೆ ಮಣ್ಣೆರಚುತ್ತಿದೆ ಎಂದು ಹೇಳಿದ್ದಾರೆ.
ಯೋಜನೆಯಡಿ ಬಡರೈತರಿಗೆ ಮಾಸಿಕ 500 ರೂ.ಅವರಿಗೆ ಮಾಡುತ್ತಿರುವ ಅವಮಾನವಾಗಿದೆ. ರೈತರು ತಮ್ಮ ಶ್ರಮವನ್ನು ನಂಬಿಕೊಂಡಿದ್ದಾರೆ ಮತ್ತು ತಮ್ಮ ಉತ್ಪನ್ನಗಳಿಗೆ ಲಾಭದಾಯಕ ಬೆಲೆಗಳನ್ನು ಬಯಸುತ್ತಾರೆ. ಆದರೆ ಅವರಿಗೆ ಅಲ್ಪ ಆರ್ಥಿಕ ನೆರವು ನೀಡುವ ಬಿಜೆಪಿಯ ಮಾನಸಿಕತೆಯು ಅಮಾನವೀಯತೆ ಮತ್ತು ಧಿಮಾಕಿನಿಂದ ಕೂಡಿದೆ. ತನ್ನ ಭರವಸೆಯನ್ನು ಈಡೇರಿಸುವಲ್ಲಿ ಬಿಜೆಪಿ ವಿಫಲಗೊಂಡಿದೆ ಎಂದು ಮಾಯಾವತಿ ರವಿವಾರ ಟ್ವೀಟಿಸಿದ್ದಾರೆ.
ಲೋಕಸಭಾ ಚುನಾವಣೆ ಸನ್ನಿಹಿತವಾಗಿರುವಾಗ ಕೆಲವು ರೈತರಿಗೆ ದಿನಕ್ಕೆ 17 ರೂ.ಗಳ ಲೆಕ್ಕದಲ್ಲಿ ನೀಡುತ್ತಿರುವುದು ಕಣ್ಣಿಗೆ ಮಣ್ಣೆರಚುವ ತಂತ್ರವಾಗಿದೆ. ರೈತರು ಮತ್ತು ಅವರ ಸಂಕಷ್ಟಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಬಿಜೆಪಿಯ ಕಳಪೆ ಚಿಂತನೆಯನ್ನು ಇದು ಪ್ರತಿಬಿಂಬಿಸುತ್ತಿದೆ. ಬಿಜೆಪಿ ಸರಕಾರದ ಅಧಿಕಾರ ಮತ್ತು ವ್ಯವಸ್ಥೆಯನ್ನು ರಾಜಾರೋಷವಾಗಿ ದುರುಪಯೋಗಿಸಿಕೊಳ್ಳುತ್ತಿದೆ ಮತ್ತು ಈಗಲೂ ಅದು ಹೇಸುತ್ತಿಲ್ಲ ಎಂದು ಮಾಯಾವತಿ ಕುಟುಕಿದ್ದಾರೆ.