ಪರೀಕ್ಷೆಯಲ್ಲಿ ಸಾಮೂಹಿಕ ನಕಲು: ವರಿಷ್ಠಾಧಿಕಾರಿ, 14 ವೀಕ್ಷಕರ ಬಂಧನ

Update: 2019-02-24 15:06 GMT

ಮುಝಫ್ಫರ್‌ನಗರ,ಫೆ.24: ಉತ್ತರ ಪ್ರದೇಶದಲ್ಲಿ ನಡೆದ ಹನ್ನೆರಡನೇ ತರಗತಿಯ ಭೌತಶಾಸ್ತ್ರ ಪರೀಕ್ಷೆಯಲ್ಲಿ ಸಾಮೂಹಿಕ ನಕಲಿಗೆ ಸಹಾಯ ಮಾಡಿದ ಆರೋಪದಲ್ಲಿ ಒಂದು ಪರೀಕ್ಷಾ ಕೇಂದ್ರದ ವರಿಷ್ಠಾಧಿಕಾರಿ ಮತ್ತು 14 ವೀಕ್ಷಕರು ಸೇರಿದಂತೆ ಒಟ್ಟು 17 ಮಂದಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇವರ ಹೊರತಾಗಿ ಇಬ್ಬರು ಖಾಸಗಿ ವ್ಯಕ್ತಿಗಳನ್ನೂ ಬಂಧಿಸಲಾಗಿದ್ದು ಪ್ರಕರಣಕ್ಕೆ ಸಂಬಂಧಿಸಿ ವಿದ್ಯಾರ್ಥಿಗಳನ್ನು ಬಂಧಿಸಲಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಸದ್ಯ ಬಂಧಿತರ ವಿರುದ್ಧ ದೂರು ದಾಖಲಿಸಲಾಗಿದ್ದು ಶನಿವಾರ ನಡೆದ ಭೌತಶಾಸ್ತ್ರ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಕೇಂದ್ರದ ಪರೀಕ್ಷಾ ಮಂಡಳಿಗೆ ಮನವಿ ಮಾಡಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಅಜಯ್ ಶಂಕರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ತನಿಖೆಗೆ ಆದೇಶಿಸಲಾಗಿದ್ದು ಮುಖ್ಯ ಅಭಿವೃದ್ಧಿ ಅಧಿಕಾರಿ (ಸಿಡಿಒ) ಅರ್ಚನಾ ವರ್ಮಾ ತನಿಖೆ ನಡೆಸಲಿದ್ದಾರೆ.

ಘಟನೆ ನಡೆದ ವೇಳೆ ಪರೀಕ್ಷಾ ಕೇಂದ್ರದಲ್ಲಿ ನಿಯೋಜನೆಗೊಂಡಿದ್ದ ಎಲ್ಲ ಸಿಬ್ಬಂದಿಯನ್ನು ಬದಲಾಯಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ವಿಶೇಷ ಕ್ರಿಯಾಪಡೆ ಪರೀಕ್ಷಾ ಕೇಂದ್ರಕ್ಕೆ ದಾಳಿ ನಡೆಸಿದ ಸಂದರ್ಭದಲ್ಲಿ ಸಾಮೂಹಿಕ ನಕಲು ಬಯಲಾಗಿದೆ. ನಕಲು ಮಾಫಿಯಾದ ವಿರುದ್ಧ ಗ್ಯಾಂಗ್‌ ಸ್ಟರ್ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ತಿಳಿಸಿದ್ದಾರೆ. ದಾಳಿಯ ವೇಳೆ ಪರಿಹರಿಸಲ್ಪಟ್ಟ ಪರೀಕ್ಷಾ ಪತ್ರಿಕೆಗಳು, ಪಿಸ್ತೂಲು, ಮೊಬೈಲ್ ಫೋನ್ ಮತ್ತು ಪರೀಕ್ಷಾ ಮಾರ್ಗದರ್ಶಿ ಪುಸ್ತಕಗಳು ಸೇರಿದಂತೆ ಒಂದು ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News