ಚುನಾವಣೆಯಲ್ಲಿ ಬಾಹ್ಯಶಕ್ತಿಗಳ ಪ್ರಭಾವವಿರದಂತೆ ನೋಡಿಕೊಳ್ಳಿ: ಟ್ವಿಟರ್‌ಗೆ ಸಂಸದೀಯ ಸಮಿತಿ ಸೂಚನೆ

Update: 2019-02-25 14:10 GMT

ಹೊಸದಿಲ್ಲಿ,ಫೆ.25: 2016 ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ನಡೆದಿದ್ದಂತೆ ಫಲಿತಾಂಶಗಳ ಮೇಲೆ ಯಾವುದೇ ಬಾಹ್ಯಶಕ್ತಿಗಳ ಪ್ರಭಾವವಿರದಂತೆ ನೋಡಿಕೊಳ್ಳಲು ಸಾರ್ವತ್ರಿಕ ಚುನಾವಣೆಗಳಿಗೆ ಮುನ್ನ ಸಮಸ್ಯೆಗಳನ್ನು ತಕ್ಷಣವೇ ಬಗೆಹರಿಸುವಂತೆ ಮತ್ತು ಚುನಾವಣಾ ಆಯೋಗದೊಡನೆ ಹೆಚ್ಚೆಚ್ಚು ತೊಡಗಿಸಿಕೊಳ್ಳುವಂತೆ ಮಾಹಿತಿ ತಂತ್ರಜ್ಞಾನ ಕುರಿತ ಸಂಸದೀಯ ಸಮಿತಿಯು ಸೋಮವಾರ ಟ್ವಿಟರ್‌ಗೆ ಸೂಚಿಸಿದೆ. ತನ್ನ ಕಳವಳಗಳ ಬಗ್ಗೆ ಚರ್ಚೆಗಾಗಿ ಮಾ.6ರಂದು ತನ್ನೆದುರು ಹಾಜರಾಗುವಂತೆ ಇತರ ಸಾಮಾಜಿಕ ಮಾಧ್ಯಮಗಳಾದ ಫೇಸ್‌ ಬುಕ್, ವಾಟ್ಸ್‌ಆ್ಯಪ್ ಮತ್ತು ಇನ್‌ಸ್ಟಾಗ್ರಾಮ್‌ಗಳ ಹಿರಿಯ ಅಧಿಕಾರಿಗಳಿಗೆ ಅದು ನಿರ್ದೇಶ ನೀಡಿದೆ.

ಟ್ವಿಟರ್‌ನ ಸಾರ್ವಜನಿಕ ನೀತಿಯ ಜಾಗತಿಕ ಉಪಾಧ್ಯಕ್ಷ ಕಾಲಿನ್ ಕ್ರಾವೆಲ್ ಮತ್ತು ಇತರ ಅಧಿಕಾರಿಗಳೊಂದಿಗೆ ಸುಮಾರು ಮೂರುವರೆ ಗಂಟೆಗಳ ಚರ್ಚೆಯ ಬಳಿಕ ಸಮಿತಿಯ ಅಧ್ಯಕ್ಷ ಅನುರಾಗ್ ಠಾಕೂರ್ ಅವರು ಸುದ್ದಿಗಾರರಿಗೆ ಈ ವಿಷಯವನ್ನು ತಿಳಿಸಿದರು.

ಲೋಕಸಭಾ ಚುನಾವಣೆಯಲ್ಲಿ ಯಾವುದೇ ಅಂತರರಾಷ್ಟ್ರೀಯ ಹಸ್ತಕ್ಷೇಪವಿರಕೂಡದು ಎಂದು ಟ್ವಿಟರ್ ಅಧಿಕಾರಿಗಳಿಗೆ ಸಮಿತಿಯು ತಾಕೀತು ಮಾಡಿದೆ. ಮುಂಬರುವ ಚುನಾವಣೆಯನ್ನು ಕಡೆಗಣಿಸದಂತೆ ಮತ್ತು ವಿದೇಶಿ ಸಂಸ್ಥೆಗಳು ಪ್ರಭಾವ ಬೀರದಂತೆ ಖಚಿತಪಡಿಸಿಕೊಳ್ಳುವಂತೆ ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಸ್ಪಷ್ಟವಾಗಿ ಹೇಳಲಾಗಿದೆ ಎಂದು ಮೂಲಗಳು ತಿಳಿಸಿದವು.

ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಿದ್ದ ರಷ್ಯಾ ಸರಕಾರವು ಡೊನಾಲ್ಡ್ ಟ್ರಂಪ್ ಅವರಿಗೆ ನೆರವಾಗುವ ಉದ್ದೇಶದಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಅವರ ಪ್ರತಿಸ್ಪರ್ಧಿ ಹಿಲರಿ ಕ್ಲಿಂಟನ್ ಅವರ ಪ್ರಚಾರವನ್ನು ಬುಡಮೇಲುಗೊಳಿಸಿತ್ತು ಎನ್ನುವುದು ತನಿಖೆಯಿಂದ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಸಂಸದೀಯ ಸಮಿತಿಯ ಈ ಖಡಕ್ ಸೂಚನೆ ಹೊರಬಿದ್ದಿದೆ ಎನ್ನಲಾಗಿದೆ.

ಟ್ವಿಟರ್ ಅಧಿಕಾರಿಗಳು ಹೆಚ್ಚಿನ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ ಮತ್ತು ಉಳಿದ ಪ್ರಶ್ನೆಗಳಿಗೆ 10 ದಿನಗಳಲ್ಲಿ ಲಿಖಿತ ಉತ್ತರಗಳನ್ನು ಸಲ್ಲಿಸಲಿದ್ದಾರೆ ಎಂದು ಠಾಕೂರ್ ತಿಳಿಸಿದರು.

ಟ್ವಿಟರ್ ಸಿಇಒ ಜಾಕ್ ಡೋರ್ಸೆ ಅವರು ತನಗೆ ಬರೆದಿದ್ದ ಪತ್ರವೊಂದನ್ನು ಠಾಕೂರ್ ಸಭೆಯಲ್ಲಿ ಓದಿ ಹೇಳಿದರು ಎಂದೂ ಮೂಲಗಳು ತಿಳಿಸಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News