35ಎ ವಿಧಿ ರದ್ದುಪಡಿಸಿದರೆ ಜಮ್ಮು ಕಾಶ್ಮೀರದಲ್ಲಿ ತ್ರಿವರ್ಣಧ್ವಜ ಹಾರಿಸಲು ಕಷ್ಟವಾಗಬಹುದು: ಮೆಹಬೂಬಾ ಮುಫ್ತಿ
ಶ್ರೀನಗರ, ಫೆ.26: ಸಂವಿಧಾನದ 35ಎ ವಿಧಿಯನ್ನು ರದ್ದುಪಡಿಸಿದಲ್ಲಿ ಅದು ಕಣಿವೆ ರಾಜ್ಯದಲ್ಲಿ ರಾಜಕೀಯ ವಿಪ್ಲವಕ್ಕೆ ಕಾರಣವಾಗುತ್ತದೆ ಎಂದು ಪಿಡಿಪಿ ನಾಯಕಿ ಹಾಗೂ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಮೋದಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
"ಈ ದೇಶದ ಧ್ವಜವನ್ನು ಹಾರಿಸಿದವರಿಗೆ ಕೂಡಾ ಅದನ್ನು ಹಿಡಿದಿಟ್ಟುಕೊಳ್ಳಲು ಕಷ್ಟವಾಗಬಹುದು" ಎಂದು ಮುಫ್ತಿ ಎಚ್ಚರಿಸಿದ್ದಾರೆ. ಸಂವಿಧಾನದ 35ಎ ವಿಧಿಯು ಜಮ್ಮು ಕಾಶ್ಮೀರದಲ್ಲಿ ಇತರ ಭಾಗಗಳ ಜನತೆ ಕಾಯಂ ವಾಸ್ತವ್ಯ ಹೊಂದುವುದನ್ನು, ಉದ್ಯೋಗ ಪಡೆಯುವುದನ್ನು, ರಾಜ್ಯದಲ್ಲಿ ನೆಲೆ ನಿಲ್ಲುವುದನ್ನು, ಸ್ಥಿರಾಸ್ತಿ ಹೊಂದುವುದನ್ನು, ವಹಿವಾಟು ನಡೆಸುವುದನ್ನು ನಿಷೇಧಿಸುತ್ತದೆ. ಇದೀಗ 35ಎ ವಿಧಿಯನ್ನು ಪ್ರಶ್ನಿಸಿ ಸಲ್ಲಿಸಿರುವ ಐದು ಅರ್ಜಿಗಳು ಸುಪ್ರೀಂಕೋರ್ಟ್ ಮುಂದಿವೆ.
ಸಂವಿಧಾನದ 35ಎ ವಿಧಿ ರದ್ದುಪಡಿಸಿದರೆ ಜಮ್ಮು ಕಾಶ್ಮೀರದ ಜನತೆ ತ್ರಿವರ್ಣ ಧ್ವಜ ಇಳಿಸಿ ಯಾವ ಧ್ವಜವನ್ನು ಹಾರಿಸುತ್ತಾರೆ ಎಂದು ಹೇಳುವುದು ಕಷ್ಟ ಎಂದು ಮುಫ್ತಿ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಸಿದರು.
ರಾಜ್ಯದ ಹಿತಾಸಕ್ತಿ ಕಾಪಾಡುವ ಸಲುವಾಗಿ ಜಂಟಿ ಕಾರ್ಯತಂತ್ರ ಅಗತ್ಯ ಎಂದು ಅವರು ಪ್ರತಿಪಾದಿಸಿದ್ದಾರೆ. ಈಗಾಗಲೇ ನ್ಯಾಷನಲ್ ಕಾನ್ಫರೆನ್ಸ್ ಜತೆ ಈ ನಿಟ್ಟಿನಲ್ಲಿ ಸಂಪರ್ಕದಲ್ಲಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.