ಮೋದಿ ಪೌರಕಾರ್ಮಿಕರ ಪಾದ ತೊಳೆಯುವ ಮೊದಲು ಸೌಲಭ್ಯಗಳಿಗೆ ಆಗ್ರಹಿಸಿದ್ದ ಕಾರ್ಮಿಕರನ್ನು ಬಂಧಿಸಲಾಗಿತ್ತು!
ಹೊಸದಿಲ್ಲಿ, ಫೆ.26: ಕಳೆದ ರವಿವಾರ ಅಲಹಾಬಾದ್ ನಲ್ಲಿ ಗಂಗಾಸ್ನಾನ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಕುಂಭ ಮೇಳ ಮೈದಾನ, ರಸ್ತೆ ಮತ್ತು ಶೌಚಾಲಯಗಳನ್ನು ಶುಚಿಯಾಗಿಟ್ಟುಕೊಂಡ ನೈರ್ಮಲ್ಯ ಕಾರ್ಮಿಕರನ್ನು ಗೌರವಿಸಿದ್ದರು ಮತ್ತು ಟಿವಿ ಪತ್ರಕರ್ತರ ಮುಂದೆ ಕೆಲವರ ಪಾದ ತೊಳೆದಿದ್ದರು. ಆದರೆ ಮೋದಿ ಭೇಟಿಗೆ ಮುನ್ನ ಉತ್ತರ ಪ್ರದೇಶ ಪೊಲೀಸರು ಮತ್ತು ಅಲಹಾಬಾಬ್ ಅಧಿಕಾರಿಗಳು ನೈರ್ಮಲ್ಯ ಕಾರ್ಮಿಕರನ್ನು ವಶಕ್ಕೆ ಪಡೆದಿದ್ದರು ಎಂದು thewire.in ವರದಿ ಮಾಡಿದೆ.
ಫೆಬ್ರವರಿ 7ರಂದು ದಲಿತ ಸಫಾಯಿ ಮಜ್ದೂರ್ ಸಂಘಟನೆಯ ಇಬ್ಬರು ಮುಖಂಡರನ್ನು ಪೊಲೀಸರು ಬಂಧಿಸಿದ್ದರು. ಮಫ್ತಿಯಲ್ಲಿ ಕೆಲ ಪೊಲೀಸರು ನಮ್ಮನ್ನು ಯಾಕೆ ಎಂದು ಕೂಡಾ ಕಾರಣ ನೀಡದೇ ಕರೆದೊಯ್ದಿದ್ದರು ಎಂದು ಅಂಶು ಮಾಳವೀಯ ಹೇಳುತ್ತಾರೆ.
ಬಂಧನಕ್ಕೆ ಒಳಗಾದ ಮಾಳವೀಯ ಹಾಗೂ ದಿನೇಶ್ ಅವರನ್ನು ಹಲವು ಠಾಣೆಗಳಿಗೆ ಕರೆದೊಯ್ಯಲಾಗಿತ್ತು. ರಾಷ್ಟ್ರವಿರೋಧಿ ಕೃತ್ಯಗಳಲ್ಲಿ ತೊಡಗಿಸಿಕೊಂಡ ನಿಮ್ಮ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ದೂರು ದಾಖಲಿಸುವುದಾಗಿ ಬೆದರಿಕೆ ಹಾಕಲಾಗಿತ್ತು ಎಂದು ದಿನೇಶ್ ಹೇಳಿದ್ದಾರೆ.
ಆರು ಗಂಟೆ ಬಳಿಕ ಸಾವಿರಾರು ನೈರ್ಮಲ್ಯ ಕಾರ್ಮಿಕರು ಠಾಣೆಗೆ ಮುತ್ತಿಗೆ ಹಾಕಿದಾಗ ಯಾವುದೇ ಆರೋಪ ಹೊರಿಸದೇ ಇವರನ್ನು ಬಿಡುಗಡೆ ಮಾಡಿದ್ದರು.
ವೇತನ ಹೆಚ್ಚಳ, ಸುರಕ್ಷತಾ ಸಲಕರಣೆಗಳಿಗೆ ಬೇಡಿಕೆ
ದಿನೇಶ್ ಮತ್ತು ಮಾಳವೀಯ ದಲಿತ್ ಸಫಾಯ್ ಮಝ್ದೂರ್ ಸಂಘಟನೆಯ ಸದಸ್ಯರಾಗಿದ್ದಾರೆ. ಕುಂಭಮೇಳ ಶುರುವಾದಾಗಿನಿಂದ ಈ ಇಬ್ಬರೂ ಸ್ವಚ್ಛತಾ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನೆ ನಡೆಸಿದ್ದರು. ಬೀದಿ, ಮೈದಾನ ಮತ್ತು ಶೌಚಾಲಯ ಸ್ವಚ್ಛತೆಗಾಗಿ ನೇಮಿಸಲ್ಪಟ್ಟ ಕಾರ್ಮಿಕರಿಗೆ ಪ್ರತಿದಿನ ಉತ್ತಮ ವೇತನ, ಹೆಚ್ಚವರಿ ಸಮಯದ ಕೆಲಸಕ್ಕೆ ಸಂಬಳ, ಉತ್ತಮ ಸೌಲಭ್ಯಗಳು, ಸಲಕರಣೆಗಳು ನೀಡಬೇಕೆಂದು ಒತ್ತಾಯಿಸಿ ಪ್ರತಿಭಟನೆಗಳು ನಡೆದಿತ್ತು. ಇದೇ ಕಾರಣದಿಂದ ಪೊಲೀಸರು ಈ ಇಬ್ಬರನ್ನು ಬಂಧಿಸಿದ್ದಾರೆ ಎಂದು ಆರೋಪಿಸಲಾಗಿದೆ.