9 ವಿಮಾನ ನಿಲ್ದಾಣಗಳಲ್ಲಿ ವಾಯುಯಾನ ಸೇವೆ ಪುನರಾರಂಭ
Update: 2019-02-27 21:24 IST
ಹೊಸದಿಲ್ಲಿ, ಫೆ.27: ಬುಧವಾರ ಬೆಳಿಗ್ಗೆ ಮುಚ್ಚಲಾಗಿದ್ದ 9 ವಿಮಾನನಿಲ್ದಾಣಗಳಲ್ಲಿ ವಾಯುಯಾನ ಸೇವೆ ಪುನರಾರಂಭವಾಗಿದೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ(ಡಿಜಿಸಿಎ)ದ ವಕ್ತಾರರು ತಿಳಿಸಿದ್ದಾರೆ.
ಪಾಕಿಸ್ತಾನದಲ್ಲಿರುವ ಭಯೋತ್ಪಾದಕರ ನೆಲೆಯ ಮೇಲೆ ಭಾರತೀಯ ವಾಯುಪಡೆ ದಾಳಿ ನಡೆಸಿದ ಬಳಿಕ ಭಾರತ- ಪಾಕ್ ಮಧ್ಯೆ ಉದ್ವಿಗ್ನ ಪರಿಸ್ಥಿತಿ ನೆಲೆಸಿದ ಕಾರಣ 9 ವಿಮಾನ ನಿಲ್ದಾಣಗಳಲ್ಲಿ ವಾಯುಸೇವೆಯನ್ನು ರದ್ದುಗೊಳಿಸಿರುವುದಾಗಿ ಬುಧವಾರ ಪ್ರಕಟಿಸಲಾಗಿತ್ತು.
ಶ್ರೀನಗರ, ಜಮ್ಮು, ಲೇಹ್, ಪಠಾಣ್‌ಕೋಟ್, ಅಮೃತಸರ, ಶಿಮ್ಲಾ, ಕಾಂಗ್ರ, ಕುಲು ಮನಾಲಿ ಮತ್ತು ಪಿಥೋರ್‌ಗಢದ ವಿಮಾನನಿಲ್ದಾಣಗಳಲ್ಲಿ ವಾಯುಯಾನ ಸೇವೆಯನ್ನು ಫೆಬ್ರವರಿ 27ರಿಂದ ಮೇ 27ರ ರವರೆಗೆ ಮುಚ್ಚಲಾಗಿದೆ ಎಂದು ಬುಧವಾರ ಬೆಳಿಗ್ಗೆ ಭಾರತೀಯ ವಿಮಾನನಿಲ್ದಾಣ ಪ್ರಾಧಿಕಾರ(ಎಎಐ)ವು ವಾಯುಪಡೆಗೆ ನೀಡಿದ ನೋಟಿಸ್‌ನಲ್ಲಿ ತಿಳಿಸಿತ್ತು. ಎಎಐ ದೇಶದಾದ್ಯಂತ 100ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳ ಆಡಳಿತವನ್ನು ನಿರ್ವಹಿಸುತ್ತದೆ.