‘ಟೆಲ್ ಅವೀವ್ ಆನ್ ಫಯರ್’ನಲ್ಲಿ ನಗುವಿಗೂ ಜಾಗವಿದೆ

Update: 2019-02-27 18:36 GMT

ಇಸ್ರೇಲ್‌ನ ಯಹೂದಿಗಳು ಮತ್ತು ಫೆಲೆಸ್ತೀನ್‌ನ ಅರಬರ ನಡುವಿನ, ಬಹಳ ಹಳೆಯ ಹಾಗೂ ಇವತ್ತಿಗೂ ಮುಂದುವರಿದಿರುವ ಬಿಕ್ಕಟ್ಟನ್ನು ಒಂದು ಟಿವಿ ಸೀರಿಯಲ್ ಶೂಟಿಂಗ್ ಮುಖಾಂತರ ‘ಟೆಲ್ ಅವೀವ್ ಆನ್ ಫಯರ್’ ಚಿತ್ರದಲ್ಲಿ ಹೇಳಲಾಗಿದೆ. ಹೇಳುವ ರೀತಿಯಲ್ಲಿ ರೀಲ್ ಮತ್ತು ರಿಯಲ್‌ಗಳನ್ನು ಸಮೀಕರಿಸಲಾಗಿದೆ. ಜಾಣತನದಿಂದ, ಹಾಸ್ಯದ ಲೇಪ ಹೊದಿಸಿ, ನಗಿಸುತ್ತಲೇ ನೋಡುಗರ ಎದೆಗೆ ದಾಟಿಸಲಾಗಿದೆ. ಆ ನಿಟ್ಟಿನಲ್ಲಿ ನಿರ್ದೇಶಕ ಸಮೇ ರೆಬಿ ಶ್ರಮ ಸಾರ್ಥಕವಾಗಿದೆ. 97 ನಿಮಿಷಗಳ, ಅರೇಬಿಕ್ ಮತ್ತು ಹಿಬ್ರೂ ಭಾಷೆಯಲ್ಲಿರುವ ಇಸ್ರೇಲಿ ಚಿತ್ರ, ಹೊಸತನದಿಂದ ಕೂಡಿದ್ದು ನೋಡುಗರ ಮೆಚ್ಚುಗೆಗೆ ಪಾತ್ರವಾಗುತ್ತದೆ.
‘ಟೆಲ್ ಅವೀವ್ ಆನ್ ಫಯರ್’ ಎಂಬುದು ಜನಪ್ರಿಯ ಟಿವಿ ಸೀರಿಯಲ್. ಇದು ಇಸ್ರೇಲ್ ಮತ್ತು ಅರಬ್ ರಾಷ್ಟ್ರಗಳ ನಡುವಿನ 1967ರ 6 ದಿನಗಳ ಯುದ್ಧ ನಡೆಯುವ ಮುಂಚಿನ ದಿನಗಳಲ್ಲಿ ನಡೆಯುವ ಕಥೆಯನ್ನಾಧರಿಸಿದ್ದು. ಇಸ್ರೇಲಿ ಮಿಲಿಟರಿ ಜನರಲ್ ಮತ್ತು ಫೆಲೆಸ್ತೀನ್ ಪರವಾಗಿ ಕೆಲಸ ಮಾಡುವ ಗೂಢಚಾರಿಣಿ ನಡುವಿನ ಪ್ರೀತಿ ಪ್ರೇಮ ಪ್ರಣಯದ ಸುತ್ತಲಿನ ಕತೆ. ಗೂಢಚಾರಿಣಿ ತನ್ನ ಸೌಂದರ್ಯದಿಂದ ಜನರಲ್‌ನನ್ನು ಮರುಳು ಮಾಡಿ, ಪ್ರೇಮಿಸುವ ನಾಟಕವಾಡಿ, ಆ ಮೂಲಕ ಇಸ್ರೇಲ್ ಮಿಲಿಟರಿಯ ರಹಸ್ಯ ಸಂಗತಿಗಳನ್ನು ಸಂಗ್ರಹಿಸಿ ಫೆಲೆಸ್ತೀನಿಯರಿಗೆ ಒದಗಿಸುವ ಒಪ್ಪಂದಕ್ಕೊಳಪಟ್ಟಿರುತ್ತಾಳೆ. ಇದು ಸಹಜವಾಗಿಯೇ ಯಹೂದಿ ಮತ್ತು ಅರಬ್ಬರ ನೆಚ್ಚಿನ ಟಿವಿ ಸೀರಿಯಲ್ ಆಗಿ, ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಾ ಸಾಗಿರುತ್ತದೆ. ಈ ಸೀರಿಯಲ್‌ನಲ್ಲಿ ಬರುವ ಹಿಬ್ರೂ ಭಾಷೆಯ ಅನುವಾದಕ್ಕಾಗಿ ಫೆಲೆಸ್ತೀನ್‌ನ ಯುವಕ ಸಲಾಂನನ್ನು ತಾತ್ಕಾಲಿಕವಾಗಿ ನೇಮಿಸಿಕೊಳ್ಳಲಾಗಿರುತ್ತದೆ. ಈತ ಫೆಲೆಸ್ತೀನಿ, ಆದರೆ ಇಸ್ರೇಲಿಗೆ ಸೇರಿದ ಭೂಪ್ರದೇಶದಲ್ಲಿ ನೆಲೆಸಿರುತ್ತಾನೆ. ಈತ ಚಿತ್ರೀಕರಣಕ್ಕೂ ಮನೆಗೂ ಕಾರಿನಲ್ಲಿ ಹೋಗಿಬರುವಾಗ, ಇಸ್ರೇಲಿ ಸೆಕ್ಯುರಿಟಿ ಸೈನಿಕರಿಂದ ತಪಾಸಣೆಗೊಳಗಾಗುವುದು ಅನಿವಾರ್ಯ.
ಹೀಗೆ ಒಂದು ಸಲ, ತಪಾಸಣೆಗೊಳಗಾದಾಗ ಇಸ್ರೇಲಿ ಸೆಕ್ಯುರಿಟಿ ಸೈನಿಕನ ಮುಂದೆ ವಿಚಾರಣೆಗೊಳಗಾಗಬೇಕಾಗುತ್ತದೆ. ಈತ ‘ಟೆಲ್ ಅವೀವ್ ಆನ್ ಫಯರ್’ ಟಿವಿ ಸೀರಿಯಲ್‌ನ ಸಂಭಾಷಣೆಕಾರ ಎನ್ನುತ್ತಾನೆ. ಅದಕ್ಕೆ ಪುರಾವೆಯಾಗಿ ಆತನ ಕಾರಿನಲ್ಲಿ ಸ್ಕ್ರಿಪ್ಟ್ ಸಿಗುತ್ತದೆ. ಆ ಇಸ್ರೇಲಿ ಸೆಕ್ಯುರಿಟಿ ಮುಖ್ಯಸ್ಥ ಅಸ್ಸಿ ಎಂಬ ಸೈನಿಕನ ಸಮಸ್ಯೆ ಏನೆಂದರೆ, ಆತನ ಮನೆಯ ಹೆಂಗಸರೆಲ್ಲ ಆ ಟಿವಿ ಸೀರಿಯಲ್‌ನ ಅಭಿಮಾನಿಗಳು. ಅದರಲ್ಲೂ ಆತನ ಹೆಂಡತಿ ಸೀರಿಯಲ್‌ನಲ್ಲಿ ಬರುವ ಮಿಲಿಟರಿ ಸ್ಫುರದ್ರೂಪಿ ಜನರಲ್ ನ ಗತ್ತಿಗೆ ಮರುಳಾಗಿ, ‘ಇದ್ದರೆ ಹಂಗಿರಬೇಕು’ ಎನ್ನುತ್ತಾ ಈ ಸೈನಿಕನನ್ನು ನಿರ್ಲಕ್ಷಿಸಿರುತ್ತಾಳೆ. ಹಾಗಾಗಿ ಈ ಸೈನಿಕನಿಗೆ ಸಲಾಂ ಸಿಕ್ಕಿದ್ದು ಒಳ್ಳೆಯದೇ ಆಗುತ್ತದೆ. ಆತ ಈತನ ಸ್ಕ್ರಿಪ್ಟ್ ಕಸಿದುಕೊಂಡು, ಪಾಸ್‌ಪೋರ್ಟ್ ಒತ್ತೆ ಇಟ್ಟುಕೊಂಡು, ನಾನೇಳಿದಂತೆ ಕತೆ ಮಾಡು ಎಂದು ಸಲಾಂನನ್ನು ಬ್ಲ್ಯಾಕ್ ಮೇಲ್ ಮಾಡಲು ಶುರು ಮಾಡುತ್ತಾನೆ. ಈತ ಅವನಿಗಿಷ್ಟವಾದ ಫುಡ್ ಪಾರ್ಸೆಲ್ ತಂದುಕೊಟ್ಟು ಪ್ಲೀಸ್ ಮಾಡಲು ನೋಡುತ್ತಿರುತ್ತಾನೆ. ಈ ನಡುವೆ ಆ ಇಸ್ರೇಲಿ ಸೈನಿಕ ಹೇಳಿದಂತೆ ಕತೆ ಕೇಳುತ್ತಾ ಕೇಳುತ್ತಾ ಕತೆಗೊಂದು ಟ್ವಿಸ್ಟ್ ಸಿಕ್ಕಿ, ಸಲಾಂ ಜನಪ್ರಿಯ ಸಂಭಾಷಣಾಕಾರನಾಗಿ ಹೆಸರು ಗಳಿಸುತ್ತಾನೆ.
ನಿರ್ಮಾಪಕರು ಸೀರಿಯಲ್ ನಿಲ್ಲದೆ ನಡೆಯುತ್ತಲೇ ಇರಲಿ ಎಂಬ ದುರಾಸೆಗೆ ಬಿದ್ದು, ಸಲಾಂಗೆ ಹಣ ಮತ್ತು ಸ್ವಾತಂತ್ರ್ಯ ನೀಡಿ, ಕತೆಯನ್ನು ಹಿಗ್ಗಿಸಲು, ನಿರಂತರತೆಯಲ್ಲಿ ಕುತೂಹಲ ಕಾಪಾಡಿಕೊಳ್ಳಲು ಒತ್ತಡ ಹಾಕುತ್ತಾರೆ. ಜನರಲ್ ಮತ್ತು ಗೂಢಚಾರಿಣಿಯ ಪ್ರಣಯ ಪ್ರಸಂಗಗಳಿಗೆ ಸಲಾಂ ತನ್ನ ಪ್ರೇಯಸಿಯ ಮೊರೆ ಹೋಗುವುದು; ಮಿಲಿಟರಿಯ ವಿಷಯಕ್ಕೆ ಬಂದಾಗ ಇಸ್ರೇಲಿ ಸೈನಿಕನ ಮುಂದೆ ಕೂತು ಆತನ ಹಿನ್ನೆಲೆ ಕೆದಕಿ, ನೈಜ ಘಟನೆಗಳನ್ನು ಆಧರಿಸುವುದು ನಡೆಯುತ್ತದೆ. ಈ ನಡುವೆ ಇಬ್ಬರಿಂದಲೂ ದೂಷಣೆಗೆ ಒಳಗಾಗಿ ಕಷ್ಟಕ್ಕೀಡಾಗುತ್ತಾನೆ. ಅಷ್ಟೇ ಅಲ್ಲದೆ, ಸೀರಿಯಲ್‌ನ ಕಥಾನಾಯಕಿ ಸಲಾಮ್‌ಗೆ ಗಂಟುಬಿದ್ದು, ತನಗೆ ಅನುಕೂಲಕರವಾದ ಸ್ಕ್ರಿಪ್ಟ್ ಸಿದ್ಧ ಮಾಡು ಎಂದು ಒತ್ತಡ ಹೇರುತ್ತಾಳೆ.
ಪ್ರೇಯಸಿ ಮುನಿಸಿಕೊಳ್ಳುತ್ತಾಳೆ, ಮನೆಯಲ್ಲಿ ಅಮ್ಮ ಮಾತನಾಡಿಸುವುದನ್ನು ನಿಲ್ಲಿಸುತ್ತಾಳೆ. ಅತ್ತ ಸೈನಿಕ ಪಾಸ್‌ಪೋರ್ಟ್ ಒತ್ತೆ ಇಟ್ಟುಕೊಂಡು ಕೂತಿದ್ದಾನೆ. ಇತ್ತ ಗೂಢಚಾರಿಣಿ ತನಗೆ ಬೇಕಾದಂತೆ ಸ್ಕ್ರಿಪ್ಟ್ ಮಾಡು ನಿನ್ನನ್ನು ಪ್ಯಾರಿಸ್‌ಗೆ ಕರೆದುಕೊಂಡು ಹೋಗುತ್ತೇನೆ ಎಂದು ಆಮಿಷ ಒಡ್ಡಿದ್ದಾಳೆ. ಇನ್ನು ಸೀರಿಯಲ್ ನಿರ್ಮಾಪಕರು ಕತೆಯಲ್ಲಿ ಟ್ವಿಸ್ಟ್ ಇರಲಿ ಎನ್ನುತ್ತಿದ್ದಾರೆ, ನೋಡುಗರ ನಿರೀಕ್ಷೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.. ಒಟ್ಟಿನಲ್ಲಿ ಸಪ್ಪೆ ಮುಖದ ಸಂಭಾಷಣೆಕಾರ ಸಲಾಂ ಎಲ್ಲ ಕಡೆಯಿಂದಲೂ ಸಮಸ್ಯೆಗೆ ಸಿಲುಕಿ, ಆಡಲಾಗದ-ಅನುಭವಿಸಲಾಗದ ದ್ವಂದ್ವಕ್ಕೆ ಒಳಗಾಗುತ್ತಾನೆ. ಈ ಸ್ಥಿತಿಯಿಂದ ಹೊರಬರುತ್ತಾನೆಯೇ ಎನ್ನುವುದೇ ಚಿತ್ರದ ಕ್ಲೈಮ್ಯಾಕ್ಸ್. ಅದನ್ನು ನೀವು ನೋಡಿಯೇ ಅನುಭವಿಸಬೇಕು.
ಚಿತ್ರ ಶುರುವಿನಿಂದ ಕೊನೆಯತನಕ ಚುರುಕು ಸಂಭಾಷಣೆಯ ಮೂಲಕ ನೋಡುಗರಲ್ಲಿ ನಗೆಯುಕ್ಕಿಸುತ್ತದೆ. ನಗೆಯ ನಡುವೆಯೇ ಸೀರಿಯಲ್ ರೈಟರ್‌ಗಳ ಕಷ್ಟಗಳನ್ನು, ನಿರ್ಮಾಪಕರ ನಿರಂತರತೆಯ ಹಪಾಹಪಿಯನ್ನು, ಇಸ್ರೇಲ್-ಫೆಲೆಸ್ತೀನ್ ಬಿಕ್ಕಟ್ಟನ್ನು, ಹಿಬ್ರೂ-ಅರೆಬಿಕ್ ಭಾಷೆಯ ಸೊಗಸನ್ನು ಹೊರಹೊಮ್ಮಿಸುತ್ತದೆ. ಸೀರಿಯಲ್ ರೈಟರ್ ಸಲಾಂ ಪಾತ್ರದಲ್ಲಿ ಕೈಸ್ ನಾಸಿಫ್ ಪ್ಯಾದೆಯಂತೆ, ಪ್ರೇಮಿಯಂತೆ, ಅಸಹಾಯಕನಂತೆ, ನಾಯಕನಂತೆ - ಪಾತ್ರಕ್ಕೆ ಜೀವ ತುಂಬಿದ್ದಾರೆ. ಸಂಕಲನ ಮತ್ತು ಸಂಗೀತ ಚಿತ್ರವನ್ನು ಇನ್ನಷ್ಟು ಸಹ್ಯಗೊಳಿಸಿವೆ. ಸೀರಿಯಲ್‌ನೊಳಗೊಂದು ಸಿನೆಮಾ ಎಂಬ ಆಲೋಚನೆಯೇ ಹೊಸತನಕ್ಕೆ ಕಾರಣವಾಗುತ್ತದೆ. ಇಸ್ರೇಲ್-ಫೆಲೆಸ್ತೀನ್ ನಂತಹ ದೇಶಗಳ ಸದ್ಯದ ಸ್ಥಿತಿಯಲ್ಲಿ ನಗುವಿಗೂ ಜಾಗವಿರುವುದು ಸಿನೆಮಾಕ್ಕಿರುವ ಶಕ್ತಿಯನ್ನು-ಸಾಧ್ಯತೆಯನ್ನು ತೋರುತ್ತದೆ. ಅಷ್ಟು ಸಾಕಲ್ಲವೇ?

Writer - ಬಸು ಮೇಗಲಕೇರಿ

contributor

Editor - ಬಸು ಮೇಗಲಕೇರಿ

contributor

Similar News