ಅದಾನಿಗೆ ವಿಮಾನ ನಿಲ್ದಾಣ ಬಿಡ್: ಹೈಕೋರ್ಟ್‌ನಲ್ಲಿ ಪ್ರಶ್ನಿಸಲು ಕೇರಳ ಸರಕಾರ ನಿರ್ಧಾರ

Update: 2019-02-28 14:59 GMT

ತಿರುವನಂತಪುರ, ಫೆ.28: ಅದಾನಿ ಗ್ರೂಪ್ ಗೆ ತಿರುವನಂತಪುರಂನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣೆಯನ್ನು ಬಿಡ್ ಮೂಲಕ ವಹಿಸಿಕೊಟ್ಟಿರುವುದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲು ನಿರ್ಧರಿಸಿರುವುದಾಗಿ ಸಿಪಿಐ(ಎಂ) ನೇತೃತ್ವದ ಕೇರಳ ಸರಕಾರ ತಿಳಿಸಿದೆ.

ಕೇಂದ್ರ ಸರಕಾರದ ಖಾಸಗೀಕರಣ ಪ್ರಕ್ರಿಯೆಯಲ್ಲಿ ವಿಮಾನ ನಿಲ್ದಾಣಗಳನ್ನು ಖಾಸಗಿಯವರಿಗೆ ವಹಿಸಲು ಬಿಡ್ ಕರೆಯಲಾಗಿತ್ತು. ಇದರಲ್ಲಿ ತಿರುವನಂತಪುರಂನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣೆ ವಹಿಸಿಕೊಳ್ಳಲು ಆಸಕ್ತವಾಗಿದ್ದ ಕೇರಳ ಸರಕಾರ ತನ್ನ ಅಂಗಸಂಸ್ಥೆ ‘ಕೇರಳ ರಾಜ್ಯ ಕೈಗಾರಿಕಾ ಅಭಿವೃದ್ಧಿ ನಿಗಮ’(ಕೆಎಸ್‌ಐಡಿಸಿ) ಮೂಲಕ ಬಿಡ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿತ್ತು. ಅಂತಿಮ ಹಂತದಲ್ಲಿ ಅದಾನಿ ಸಂಸ್ಥೆ ಅಧಿಕ ದರ ನಿಗದಿಗೊಳಿಸಿದ ಕಾರಣ ಬಿಡ್ ಪಡೆಯುವಲ್ಲಿ ಸಫಲವಾಗಿತ್ತು. ಅದಾನಿ ಸಂಸ್ಥೆ ‘ಪ್ರತೀ ಪ್ರಯಾಣಿಕ ಶುಲ್ಕ’ವಾಗಿ 168 ರೂ. ನಮೂದಿಸಿದ್ದರೆ ಕೆಎಸ್‌ಐಡಿಸಿ 135 ರೂ, ಜಿಎಂಎಆರ್ 63 ರೂ. ನಿಗದಿಗೊಳಿಸಿತ್ತು.

‘ರಾಜ್ಯ ಬೆಂಬಲ ಒಪ್ಪಂದ’ಕ್ಕೆ ನಾವು ಸಹಿ ಹಾಕುವುದಿಲ್ಲ. ರಾಜ್ಯ ಸರಕಾರ ವಿಮಾನ ನಿಲ್ದಾಣದ ಜಮೀನಿಗಾಗಿ ಅಪಾರ ಹಣ ವಿನಿಯೋಗಿಸಿದ್ದು ಈಗ ಖಾಸಗಿ ಸಂಸ್ಥೆಯೊಂದು ಇದರ ಲಾಭವನ್ನು ಪಡೆಯಲು ಅವಕಾಶ ನೀಡುವುದಿಲ್ಲ ಎಂದು ಸರಕಾರದ ವಕ್ತಾರರು ತಿಳಿಸಿದ್ದಾರೆ. ವಿಮಾನ ನಿಲ್ದಾಣಕ್ಕೆ ವಿದ್ಯುತ್ , ನೀರು ಹಾಗೂ ಇತರ ಮೂಲಭೂತ ಸೌಕರ್ಯಗಳನ್ನು ರಾಜ್ಯ ಸರಕಾರ ಒದಗಿಸಬೇಕು.

ಅದಾನಿ ಸಂಸ್ಥೆಯನ್ನು ಆಯ್ಕೆ ಮಾಡಿಕೊಳ್ಳಲು ಕೇಂದ್ರ ಸರಕಾರ ಬಿಡ್ಡಿಂಗ್ ಪ್ರಕ್ರಿಯೆಯ ನಾಟಕವಾಡಿದೆ ಎಂಬ ಸಂಶಯವಿದೆ. ಬಿಡ್ಡಿಂಗ್ ಪ್ರಕ್ರಿಯೆಯೇ ನಿಗೂಢವಾಗಿದೆ. ಅದಾನಿ ಸಂಸ್ಥೆಗೆ ವಿಮಾನ ನಿಲ್ದಾಣದ ನಿರ್ವಹಣೆಯಲ್ಲಿ ಅನುಭವವೇ ಇಲ್ಲ. ಒಂದೇ ಸಂಸ್ಥೆ ಎಲ್ಲಾ ಐದೂ ಬಿಡ್‌ಗಳನ್ನು ಗೆಲ್ಲಲು ಹೇಗೆ ಸಾಧ್ಯ. ಇಲ್ಲಿ ಏನೋ ಮೋಸದಾಟ ನಡೆದಿರುವ ಸಂಶಯವಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

‘ಮೊದಲ ನಿರಾಕರಣೆಯ ಹಕ್ಕು’ ರಾಜ್ಯ ಸರಕಾರಕ್ಕಿದೆ ಎಂದು ಮೊದಲು ಒಪ್ಪಿದ್ದ ಕೇಂದ್ರ ಸರಕಾರ, ಬಳಿಕ ಇದನ್ನು ಕೇವಲ ಶೇ.10ಕ್ಕೆ ಇಳಿಸಿದೆ. ಅದಾನಿಗೆ ನೆರವಾಗುವ ಉದ್ದೇಶ ಇದರಲ್ಲಿದೆ. ಅಂತಿಮ ಗಳಿಗೆಯಲ್ಲಿ ನಮ್ಮ ಪ್ರಸ್ತಾವನೆಯನ್ನು ಕೈಬಿಡಲಾಗಿದೆ ಎಂದು ಪಕ್ಷದ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಹೇಳಿದ್ದಾರೆ. ಆದರೆ ಸರಕಾರ ಬಿಡ್‌ನಲ್ಲಿ ಪಾಲ್ಗೊಳ್ಳಲೇ ಬಾರದಿತ್ತು ಎಂದು ವಿಪಕ್ಷ ಕಾಂಗ್ರೆಸ್ ಹೇಳಿದೆ. ಬಿಡ್‌ನಲ್ಲಿ ಸೋತ ಬಳಿಕ ದೂರುವುದು ಸರಿಯಲ್ಲ ಎಂದು ಕಾಂಗ್ರೆಸ್ ಮುಖಂಡ ವಿಎಂ ಸುಧೀರನ್ ಹೇಳಿದ್ದಾರೆ.

ಕೆಎಸ್‌ಐಡಿಸಿ ಬದಲು ಕೊಚಿನ್ ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿ.(ಸಿಐಎಎಲ್) ಬಿಡ್‌ನಲ್ಲಿ ಪಾಲ್ಗೊಳ್ಳಬೇಕಿತ್ತು ಎಂದು ವಿಮಾನ ನಿಲ್ದಾಣದ ಕೆಲವು ಸಿಬಂದಿಗಳು ಅಭಿಪ್ರಾಯಪಟ್ಟಿದ್ದಾರೆ. ಈ ಹಿಂದೆ ಕೋಲ್ಕತಾ ವಿಮಾನ ನಿಲ್ದಾಣವನ್ನು ಖಾಸಗಿಯವರಿಗೆ ವಹಿಸಿಕೊಡಲು ಕೇಂದ್ರ ಸರಕಾರ ಮುಂದಾದಾಗ ಮಮತಾ ಬ್ಯಾನರ್ಜಿ ಸರಕಾರ ತಾನು ಒಪ್ಪಂದಕ್ಕೆ ಸಹಿ ಹಾಕುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು. ಇದರಿಂದಾಗಿ ಕೋಲ್ಕತಾ ನಿಲ್ದಾಣವನ್ನು ಪಟ್ಟಿಯಿಂದ ಕೈಬಿಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News