×
Ad

ವಾಘಾ ಗಡಿ ಮೂಲಕ ಭಾರತಕ್ಕೆ ಮರಳಿದ ವೀರಯೋಧ ಅಭಿನಂದನ್

Update: 2019-03-01 21:23 IST

ಹೊಸದಿಲ್ಲಿ, ಮಾ.1: ಪಾಕ್ ವಶದಲ್ಲಿದ್ದ ಭಾರತೀಯ ವಾಯುಪಡೆಯ ಪೈಲಟ್ ಅಭಿನಂದನ್ ಇಂದು ವಾಘಾ ಗಡಿಯ ಮೂಲಕ ಭಾರತ ಪ್ರವೇಶಿಸಿದ್ದಾರೆ. ಅಭಿನಂದನ್ ಭಾರತಕ್ಕೆ ಮರಳಿದ ಹೊರತಾಗಿಯೂ ಗಡಿಯುದ್ದಕ್ಕೂ ಹೈ ಅಲರ್ಟ್ ಇದೆ.

ಅಭಿನಂದನ್ ವಾಘಾ ಗಡಿಗೆ ಆಗಮಿಸಿದ ಕೂಡಲೇ ಅವರನ್ನು ವಾಯುಪಡೆಯ ಬೇಹುಗಾರಿಕಾ ಘಟಕಕ್ಕೆ ನೇರವಾಗಿ ಕೊಂಡೊಯ್ಯಲಾಯಿತು.

ಅವರ ದೈಹಿಕ ಕ್ಷಮತೆಯ ತಪಾಸಣೆಗಾಗಿ ಅವರನ್ನು ವಿವಿಧ ವೈದ್ಯಕೀಯ ಪರೀಕ್ಷೆಗಳಿಗೆ ಒಳಪಡಿಸಲಾಯಿತು.

ಅಭಿನಂದನ್ ಅವರನ್ನು ಮಾನಸಿಕ ಪರೀಕ್ಷೆಗೂ ಒಳಪಡಿಸಲಾಗುವುದು. ಅವರು ಎದುರಾಳಿ ರಾಷ್ಟ್ರದ ಸೆರೆಯಲ್ಲಿದ್ದುದರಿಂದ ಹಾಗೂ ಅವರಿಂದ ರಾಷ್ಟ್ರೀಯ ಭದ್ರತಾ ರಹಸ್ಯಗಳನ್ನು ತಿಳಿದುಕೊಳ್ಳಲು ಅವರಿಗೆ ಚಿತ್ರಹಿಂಸೆ ನೀಡಿರುವ ಸಾಧ್ಯತೆಯ ಬಗ್ಗೆ ರಕ್ಷಣಾ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ.

ಬೇಹುಗಾರಿಕಾ ದಳ (ಐಬಿ) ಹಾಗೂ ‘ರಾ‘ದ ಅಧಿಕಾರಿಗಳು ಕೂಡಾ ಅವರನ್ನು ಪ್ರಶ್ನಿಸುವ ಸಾಧ್ಯತೆಯೂ ಇದೆ. ಸಾಮಾನ್ಯವಾಗಿ ಈ ಕ್ರಮವನ್ನು ಅನುಸರಿಸದಿದ್ದರೂ ಬಂಧನದಲ್ಲಿದ್ದಾಗ ಅಭಿನಂದನ್ ಅವರಿಂದ ಮಿಲಿಟರಿ ಮಾಹಿತಿಗಳನ್ನು ಪಡೆದುಕೊಳ್ಳಲಾಗಿತ್ತೇ ಅಥವಾ ತಮ್ಮ ಪರವಾಗಿ ಕೆಲಸ ಮಾಡುವಂತೆ ಅವರನ್ನು ಎದುರಾಳಿ ರಾಷ್ಟ್ರವು ನಿಯೋಜಿಸಿಲ್ಲವೆಂಬುದನ್ನು ಖಾತರಿಪಡಿಸುವುದಕ್ಕಾಗಿ ಅವು ತನಿಖೆ ನಡೆಸಲಿವೆ.

► ಪಾಕ್ ಸೇನೆಗೆ ಸೆರೆಸಿಕ್ಕಿ ಭಾರತಕ್ಕೆವಾಪಸಾದ ಸೇನಾಧಿಕಾರಿಗಳಿವರು..

1999ರ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಪಾಕಿಸ್ತಾನ ಸೇನೆಗೆ ಸೆರೆಸಿಕ್ಕಿದ್ದ ಭಾರತೀಯ ಯುದ್ಧ ವಿಮಾನದ ಪೈಲಟ್ ಕಂಬಾಂಪಟ್ಟಿ ನಚಿಕೇತ ಕೂಡಾ ಅವರನ್ನು ಕೂಡಾ ಅಂತಾರಾಷ್ಟ್ರೀಯ ಒತ್ತಡದ ಹಿನ್ನೆಲೆಯಲ್ಲಿ ಭಾರತಕ್ಕೆ ಮರಳಿಸಲಾಗಿತ್ತು.

ಭಾರತದ ಸೇನೆಯ ಮುಖ್ಯಸ್ಥರಾಗಿದ್ದ ಫೀಲ್ಡ್ ಮಾರ್ಶಲ್ ಕೆ.ಎಂ. ಕಾರಿಯಪ್ಪ ಅವರ ಪುತ್ರ ಏರ್‌ಮಾರ್ಶಲ್ ಕೆ.ಸಿ. ನಂದ ಕಾರಿಯಪ್ಪ ಅವರ 1965ರ ಭಾರತ-ಪಾಕ್ ಯುದ್ಧದಲ್ಲಿ ಪಾಕ್ ಪಡೆಗಳಿಂದ ಬಂಧಿಸಲ್ಪಟ್ಟಿದ್ದರು. ಯುದ್ಧ ಮುಗಿದ ನಾಲ್ಕು ತಿಂಗಳ ಆನಂತರ ಅವರು ಇತರ ಯುದ್ಧಕೈದಿಗಳೊಂದಿಗೆ ಬಿಡುಗಡೆಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News