ಅಭಿವೃದ್ಧಿಯ ಮೋಹಿನಿಗೆ ಮರುಳಾದವರು...

Update: 2019-03-01 18:33 GMT

ಅಭಿವೃದ್ಧಿ ಎಂಬ ಹುಚ್ಚು ಹಿಡಿದ ಏಕಮುಖದ ಯೋಜನೆಗಳಿಗೆ ಕೊನೆ ಹೇಳಿ, ಪರಿಸರದ ಆರೋಗ್ಯದ ಜೊತೆಗೆ ಮನುಷ್ಯನ ಅಭಿವೃದ್ಧಿಯ ಎಳೆಗಳನ್ನು ರೂಪಿಸದಿದ್ದರೆ ದುರಂತ ಕಟ್ಟಿಟ್ಟ ಬುತ್ತಿ. ನಮ್ಮ ಹಿಂದಿನ ತಪ್ಪುಗಳನ್ನು ಸರಿಪಡಿಸಲು ಈಗ ಸಕಾಲ. ಆರ್ಥಿಕವಾಗಿ ಮತ್ತು ಪರಿಸರಾತ್ಮಕವಾದ ಸುಸ್ಥಿರ ಅಭಿವೃದ್ಧಿ ಯೋಜನೆಗಳು, ಈಗ ಪ್ರಚಲಿತವಿರುವ ಮಾನವ ಕಲ್ಯಾಣವನ್ನೇ ಗುರಿಯಾಗಿಸಿಕೊಂಡಿರುವ ಅಭಿವೃದ್ಧಿ ಮಾದರಿಗಳನ್ನು ಸ್ಥಳಾಂತರಿಸಬೇಕು. ಪ್ರಭುತ್ವದ ಮೇಲೆ ಜನರು ಒತ್ತಾಯ ಹೇರಿ ತಮ್ಮ ಉದ್ಧಾರವನ್ನು ತಾವೇ ಮಾಡಿಕೊಳ್ಳಬೇಕಾದ ಕಾಲವಿದು. ನಮ್ಮ ಬದುಕಿನ ಶೈಲಿ, ಸರಕಾರಿ ಯೋಜನೆಗಳ ಸ್ವರೂಪ ಮತ್ತು ಜನಪ್ರತಿನಿಧಿಗಳ ಆಲೋಚನಾ ರೀತಿಗಳೆಲ್ಲ ಸಮಗ್ರವಾದ ಪರಿವರ್ತನೆಗೆ ಒಳಗಾಗಬೇಕಾದ ಕಾಲ. ಇಲ್ಲದಿದ್ದರೆ ಮೋಹಿನಿಯ ನರ್ತನಕ್ಕೆ ತಾನೇ ಮನಸೋತು ಉರಿದು ಹೋದ ಭಸ್ಮಾಸುರನ ಪಾತ್ರಕ್ಕೆ ನಾವು ತಯಾರು ಮಾಡಿಕೊಳ್ಳುತ್ತಿರುವುದು ನಿಶ್ಚಿತ.


ಹವಾಮಾನ ಬದಲಾವಣೆ ಎಂಬ ಪೆಡಂಭೂತ ಈಗ ಹಲವು ದೇಶಗಳಲ್ಲಿ ಅನೇಕ ಅವತಾರಗಳನ್ನೆತ್ತಿ ಅವಾಂತರ ಸೃಷ್ಟಿಸುತ್ತಿದೆ. ಈ ಬದಲಾವಣೆಯಿಂದ ಅಮೆರಿಕದ ಕ್ಯಾಲಿಫೋರ್ನಿಯಾ ಪ್ರಾಂತವು ನೀರಿನ ಅಭಾವ ಮತ್ತು ಬೆಂಕಿಯ ಅವಘಡಗಳನ್ನು ಎದುರಿಸುತ್ತಿದೆ. ನೀರಿನ ಕೊರತೆಗೆ ಸಂಬಂಧಿಸಿದ ಸಮಸ್ಯೆಗಳು ಮೆಕ್ಸಿಕೋ ನಗರವನ್ನು ಬಾಧಿಸುತ್ತಿವೆ. ಉತ್ತರ ಖಂಡದಲ್ಲಿ ಸಂಭವಿಸಿದ ಘೋರ ಪ್ರವಾಹಗಳಿಂದ ಭಾರತ ತತ್ತರಿಸಿದೆ. ಇಲ್ಲೇ, ನಮ್ಮ ರಾಜ್ಯದಲ್ಲಿ ಕಳೆದ ವರ್ಷ ಸುಂದರವಾದ ಕೊಡಗು ಪ್ರಾಂತ ಎದುರಿಸಿದ ಆಘಾತ ಮತ್ತು ಈಗ ಬಂಡೀಪುರದ ಬೆಂಕಿ ದುರಂತ ಹವಾಮಾನ ಬದಲಾವಣೆಯೆಂಬ ರಾಕ್ಷಸನ ಮತ್ತೆರಡು ಅವತಾರಗಳ ದರ್ಶನ. ಅರಣ್ಯ ಇಲಾಖೆಯು ರೂಪಿಸಿದ ಯೋಜನೆಗಳು ಸಿಬ್ಬಂದಿಯ ಶ್ರಮ ಮತ್ತು ಸಾರ್ವಜನಿಕರ ಪ್ರಯತ್ನಗಳ ಹೊರತಾಗಿಯೂ ನಾಲ್ಕು ದಿನಗಳ ಕಾಲ ಬಂಡೀಪುರ ಹೊತ್ತಿ ಉರಿಯಿತು. ಉರಿಯುವ ಬೆಂಕಿಯಲ್ಲಿ ನರಳಿದ ಜೀವರಾಶಿಯ ಮನಕಲಕುವ ಬಿಂಬಗಳು ಸಾರ್ವಜನಿಕರಲ್ಲಿ ಹಲವು ಭಾವಗಳ ಉದ್ದೀಪನಕ್ಕೆ ಕಾರಣವಾಯಿತು. ನಮ್ಮ ಹೊಣೆಗೇಡಿತನದ ಪಾಪ ಪ್ರಜ್ಞೆ, ಅನುಕಂಪ, ದುಃಖ.. ಹೀಗೆ ನಾನಾ ಭಾವಗಳ ಜೊತೆಯಲ್ಲಿ ನಮ್ಮ ಯೋಜನೆಗಳ ಟೊಳ್ಳುತನ, ಅಭಿವೃದ್ಧಿಯೆಂಬ ಮಾಯಾವಿ, ಅರಣ್ಯ ನಾಶದಂತಹ ಆಪತ್ತುಗಳೆಲ್ಲವೂ ಅನಾವರಣವಾದವು. ಕೊನೆಗೂ ವಾಯುಪಡೆಯ ವಿಮಾನಗಳ ಸೇವೆಯನ್ನು ಬಳಸಿ ಈ ಉರಿಯನ್ನು ತಣ್ಣಗಾಗಿಸಬೇಕಾಯಿತು.

ಈ ದುರಂತದಿಂದ ಈಗ ಸುಮಾರು ಹತ್ತು ಸಾವಿರ ಎಕರೆ ಅರಣ್ಯ ಪ್ರದೇಶ ಬೆತ್ತಲೆಯಾಗಿದೆ. ಅದರ ಮೈಮೇಲಿದ್ದ ಗಿಡ, ಮೆಳೆ, ಹುಲ್ಲು, ಮರಗಳು ಸುಟ್ಟು ಬೂದಿಯಾಗಿವೆ. ಇಳೆಗೆ ಜೀವ ತುಂಬಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತಿದ್ದ ಕ್ರಿಮಿ, ಕೀಟ, ಮಣ್ಣಿನ ಜಂತು, ಅವುಗಳ ಮೊಟ್ಟೆ, ಹಕ್ಕಿಗಳ ಗೂಡು, ಆವಾಸಸ್ಥಾನ ಎಲ್ಲವೂ ನಾಶವಾಗಿದೆ. ಈ ಪರಿಸರವನ್ನು ತಮ್ಮ ನೆಲೆಯಾಗಿಸಿಕೊಂಡು ಆಹಾರದ ಮೂಲ ಕಂಡುಕೊಂಡಿದ್ದ ಅನೇಕ ಪ್ರಾಣಿಗಳು ನೆಲೆ ತಪ್ಪಿವೆ. ಜೀವಜಾಲದ ಕೊಂಡಿ ಕಳಚಿದೆ. ಇದರ ಪರಿಣಾಮ ಈಗ ಭೂಮಿ ಬಿಸಿಲು, ಗಾಳಿ, ಮಳೆಯ ಹೊಡೆತಕ್ಕೆ ತುತ್ತಾಗುತ್ತಿದೆ. ಭೂ ಸವಕಳಿಯಂತಹ ಪರಿಸರ ವಿನಾಶ ಕ್ರಿಯೆಗಳು ಆರಂಭವಾಗಿ ಭೂಮಿ ಮತ್ತಷ್ಟು ಬಡವಾಗುತ್ತಿದೆ. ಕಳೆದುಕೊಂಡ ಭೂ ಸಂಪತ್ತು, ತುಂಡರಿಸಿದ ಜೀವಜಾಲದ ಸರಪಳಿ, ನಾಶವಾದ ಸೂಕ್ಷ್ಮಜೀವಿಗಳು-ಇವೆಲ್ಲವೂ ಮತ್ತೆ ಹಿಂದಿನ ಸ್ಥಿತಿಗೆ ಮರಳಬೇಕಾದರೆ ಭೂಮಿಗೆ ಅದೆಷ್ಟು ವರ್ಷ ಹಿಡಿಯುತ್ತದೋ ತಿಳಿಯದು.

ನಮ್ಮ ಕರ್ನಾಟಕದ ಅರಣ್ಯಗಳ ಸ್ಥಿತಿಗತಿಗಳು ಮತ್ತು ಸಮುದಾಯ ಬೇಡಿಕೆಗಳ ಮಾಹಿತಿಗಳನ್ನು ಅವಲೋಕಿಸಿ ‘ಕರ್ನಾಟಕ ವನ್ಯ ಸಂಪತ್ತು’ ಎಂಬ ಕಿರು ಹೊತ್ತಿಗೆಯನ್ನು 1976 ರಲ್ಲಿ ನಾನು ಪ್ರಕಟಿಸಿದ್ದೆ. ಅರಣ್ಯನಾಶದ ಬಗ್ಗೆ ಎಚ್ಚರಿಕೆಯ ಮಾತುಗಳನ್ನು ಹೇಳುತ್ತಾ ಈಗ(1976ರಲ್ಲಿ) ಎಪ್ಪತ್ತನಾಲ್ಕು ತಾಲೂಕುಗಳಲ್ಲಿರುವ ಬರ ಮುಂದೆ ಇನ್ನಷ್ಟು ತಾಲೂಕುಗಳನ್ನು ಆವರಿಸಿಕೊಳ್ಳುವುದು ನಿಶ್ಚಿತವೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದೆ. ಅದೇ ರೀತಿ 2002ರ ನಂತರ ಅರಣ್ಯ ಇಲಾಖೆಯು ಜನರ ಉರುವಲು ಬೇಡಿಕೆಯನ್ನು ಪೂರೈಸಲು ವಿಫಲವಾಗಲಿದೆಯೆಂದು ವಿವರಿಸಿದ್ದೆ. ಜೊತೆಗೆ ಅರಣ್ಯ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವ ಮೊತ್ತ ಗಣನೀಯವಾಗಿ ಏರುತ್ತದೆಂದು ತಿಳಿಸಿದ್ದೆ. ನನ್ನ ಅಭಿಪ್ರಾಯವನ್ನು ಅಲ್ಲಗೆಳೆದ ಅನೇಕ ಹಿರಿಯ ಅಧಿಕಾರಿಗಳು ಕರ್ನಾಟಕದ ಅರಣ್ಯಗಳ ವ್ಯಾಪ್ತಿ ಮತ್ತು ಅದರ ಸಂಪತ್ತಿನ ಅರಿವಿರದ ದಡ್ಡನೊಬ್ಬನ ಅಭಿಪ್ರಾಯಗಳೆಂದು ಹಾಸ್ಯ ಮಾಡಿದ್ದರು.

ಆದರೆ, ನನ್ನ ಭವಿಷ್ಯ ನಾನು ನಿರೀಕ್ಷಿಸಿದ ಸಮಯಕ್ಕಿಂತ ಬೇಗನೇ ನಿಜವಾಗಿದೆ. 1995ರಲ್ಲಿ ನಾನು ಅರಣ್ಯ ಇಲಾಖೆಯ ಕಾರ್ಯದರ್ಶಿಯಾಗಿದ್ದ ಸಮಯದಲ್ಲಿ ಅರಣ್ಯ ಇಲಾಖೆಗೆ ಜನರ ಬೇಡಿಕೆಗಳನ್ನು ಈಡೇರಿಸುವ ಸಾಮರ್ಥ್ಯ ಇಲ್ಲವಾದ್ದರಿಂದ ರಾಜ್ಯದಲ್ಲಿರುವ ಎಲ್ಲ ಉರುವಲು ಡಿಪೋಗಳನ್ನು ಮುಚ್ಚಲು ನನ್ನ ಕಾರ್ಯಾಲಯದಿಂದ ಅನುಮತಿ ನೀಡಬೇಕೆಂದು ಮನವಿ ಪತ್ರ ಬಂತು!

ಇಂದು ಅರಣ್ಯ ಉತ್ಪನ್ನಗಳ ಆಮದು ಮೊತ್ತ ವಾರ್ಷಿಕ 44,500 ಕೋಟಿಯಷ್ಟು ಏರಿಕೆಯಾಗಿದೆ. 1970 ರಲ್ಲಿ 74 ತಾಲೂಕುಗಳಲ್ಲಿ ಕಾಣಿಸಿಕೊಂಡಿದ್ದ ಬರ ಈಗ 135 ತಾಲೂಕುಗಳಲ್ಲಿ ತಾಂಡವವಾಡುತ್ತಿದೆ. ಅರಣ್ಯ ನಾಶಕ್ಕೂ ಅದರಿಂದ ಸಂಭವಿಸುವ ಹವಾಮಾನ ಬದಲಾವಣೆಗೂ, ನೈಸರ್ಗಿಕ ವಿಪತ್ತು ಮತ್ತು ತಾಂಡವವಾಡುತ್ತಿರುವ ಬರಕ್ಕೂ ನೇರ ಸಂಬಂಧವಿದೆ. 2018ರ ಕೊಡಗು ಜಿಲ್ಲೆಯ ದುರಂತ ಮತ್ತು ಬಂಡೀಪುರದ ಬೆಂಕಿ ಇವುಗಳ ಪರಿಣಾಮದ ಸರಣಿ ನಿಧಾನವಾಗಿ ಆರಂಭವಾಗಿದೆ. ಕೊಡಗಿನ ದುರಂತ ಸಮುದಾಯವನ್ನು ನಿರಾಶ್ರಿತಗೊಳಿಸಿದೆ. ಕೃಷಿ ಇಳುವರಿಯನ್ನು ನಾಶ ಪಡಿಸಿದೆ. ರೈತರ ಸಾಲ ಹೆಚ್ಚಿದೆ. ನೆಲೆ ತಪ್ಪಿದ ಸಾಲಗಾರನಾದ ರೈತ, ಬದುಕನ್ನು ಕಳೆದುಕೊಂಡ ಸಾವಿರಾರು ಕುಟುಂಬಗಳ ದುರಂತವು ಸಾಂತ್ವನ, ಪರಿಹಾರ, ಸಹಾನುಭೂತಿಯಿಂದ ಶಮನವಾಗುವುದಿಲ್ಲ. ಹಾಗೆಯೇ ಬಂಡೀಪುರದ ಬೆಂಕಿ ನಮ್ಮ ಘನತೆ ಮತ್ತು ಸಂಸ್ಕೃತಿಯ ಹೆಮ್ಮೆಯೆನಿಸಿದ ಅರಣ್ಯ ಸಂಪತ್ತು, ವೈಭವದ ವನ್ಯಜೀವಿಗಳು ಬರಿದಾಗುವಂತೆ ಮಾಡಿದೆ. ಹವಾಮಾನ ಬದಲಾವಣೆಗಳು ನಮ್ಮನ್ನು ನೋಡಿ ಅಪಹಾಸ್ಯ ಮಾಡುತ್ತಿವೆ. ನಮ್ಮ ದುರ್ಬಲ ಪರಿಹಾರಗಳು ಬದುಕನ್ನು ಸಮರ್ಥವಾಗಿ ಮರು ರಚಿಸಲಾರವು.

ಇನ್ನು ಮುಂದೆ ಕೊಡಗು ತೀವ್ರ ನೀರಿನ ಅಭಾವವನ್ನು ಎದುರಿಸಲಿ. ಬೆಂಗಳೂರು ನೀರಿನ ಕೊರತೆಯು ಈಗಾಗಲೇ ಸ್ಪಷ್ಟವಾಗಿ ಗೋಚರಿಸುತ್ತಿದೆ. ಬೆಂಗಳೂರು ನಗರದ ಬೆನ್ನಹಿಂದೆಯೇ ಇನ್ನೂ ಹನ್ನೊಂದು ಪ್ರಮುಖ ನಗರಗಳಲ್ಲಿ ನೀರಿನ ಸಮಸ್ಯೆ ತಲೆದೋರುತ್ತದೆ. ಕುಡಿಯುವ ನೀರಿನ ಕೊರತೆಯ ಜೊತೆಯಲ್ಲಿ ರೋಗರುಜಿನಗಳು ಆಗಮಿಸುತ್ತವೆ. ಸಾವು ಅದರ ಪರಿಣಾಮ.

ಭಾರತದಲ್ಲಿ ವಾಯುಮಾಲಿನ್ಯದಿಂದಾಗಿ ವಾರ್ಷಿಕ 18 ಲಕ್ಷ ಜನರು ಮತ್ತು ಜಲ ಮಾಲಿನ್ಯದಿಂದಾಗಿ ನೀರಿನ ಅಭಾವದಿಂದ 72 ಲಕ್ಷ ಜನರು ಮರಣಿಸಬಹುದೆಂದು ಲ್ಯಾನ್ಸೆಟ್ ಆಯೋಗದ ವರದಿ ಅಂದಾಜಿಸಿದೆ. ಅಭಿವೃದ್ಧಿ ಎಂಬ ಹುಚ್ಚು ಹಿಡಿದ ಏಕಮುಖದ ಯೋಜನೆಗಳಿಗೆ ಕೊನೆ ಹೇಳಿ, ಪರಿಸರದ ಆರೋಗ್ಯದ ಜೊತೆಗೆ ಮನುಷ್ಯನ ಅಭಿವೃದ್ಧಿಯ ಎಳೆಗಳನ್ನು ರೂಪಿಸದಿದ್ದರೆ ದುರಂತ ಕಟ್ಟಿಟ್ಟ ಬುತ್ತಿ. ನಮ್ಮ ಹಿಂದಿನ ತಪ್ಪುಗಳನ್ನು ಸರಿಪಡಿಸಲು ಈಗ ಸಕಾಲ. ಆರ್ಥಿಕವಾಗಿ ಮತ್ತು ಪರಿಸರಾತ್ಮಕವಾದ ಸುಸ್ಥಿರ ಅಭಿವೃದ್ಧಿ ಯೋಜನೆಗಳು, ಈಗ ಪ್ರಚಲಿತವಿರುವ ಮಾನವ ಕಲ್ಯಾಣವನ್ನೇ ಗುರಿಯಾಗಿಸಿಕೊಂಡಿರುವ ಅಭಿವೃದ್ಧಿ ಮಾದರಿಗಳನ್ನು ಸ್ಥಳಾಂತರಿಸಬೇಕು. ಪ್ರಭುತ್ವದ ಮೇಲೆ ಜನರು ಒತ್ತಾಯ ಹೇರಿ ತಮ್ಮ ಉದ್ಧಾರವನ್ನು ತಾವೇ ಮಾಡಿಕೊಳ್ಳಬೇಕಾದ ಕಾಲವಿದು. ನಮ್ಮ ಬದುಕಿನ ಶೈಲಿ, ಸರಕಾರಿ ಯೋಜನೆಗಳ ಸ್ವರೂಪ ಮತ್ತು ಜನಪ್ರತಿನಿಧಿಗಳ ಆಲೋಚನಾ ರೀತಿಗಳೆಲ್ಲ ಸಮಗ್ರವಾದ ಪರಿವರ್ತನೆಗೆ ಒಳಗಾಗಬೇಕಾದ ಕಾಲ. ಇಲ್ಲದಿದ್ದರೆ ಮೋಹಿನಿಯ ನರ್ತನಕ್ಕೆ ತಾನೇ ಮನಸೋತು ಉರಿದು ಹೋದ ಭಸ್ಮಾಸುರನ ಪಾತ್ರಕ್ಕೆ ನಾವು ತಯಾರು ಮಾಡಿಕೊಳ್ಳುತ್ತಿರುವುದು ನಿಶ್ಚಿತ.

(ಎ.ಸಿ.ಲಕ್ಷ್ಮಣ, ನಿವೃತ್ತ ಹಿರಿಯ ಅರಣ್ಯಾಧಿಕಾರಿ, ಹೆಚ್ಚುವರಿ ಪ್ರಧಾನ ಅರಣ್ಯ ಸಂಕ್ಷಣಾಧಿಕಾರಿ, ಅರಣ್ಯ ಕಾರ್ಯದರ್ಶಿಯಾಗಿ ನಿವೃತ್ತರಾದ ಅವರು ಈಗಲೂ ಜನಸಮುದಾಯದೊಡನೆ ಬೆರೆತು ಕೃಷಿ, ಅರಣ್ಯ ಕ್ಷೇತ್ರದಲ್ಲಿನ ಪ್ರಯೋಗಗಳಲ್ಲಿ ನಿರತರಾಗಿದ್ದಾರೆ)

Writer - ಎ. ಸಿ. ಲಕ್ಷ್ಮಣ್

contributor

Editor - ಎ. ಸಿ. ಲಕ್ಷ್ಮಣ್

contributor

Similar News