ಮೊದಲ ಏಕದಿನ: ಆಸೀಸ್‌ಗೆ ಸೋಲುಣಿಸಿದ ಭಾರತ ಶುಭಾರಂಭ
ಹೈದರಾಬಾದ್, ಮಾ.2: ಆಲ್‌ರೌಂಡರ್ ಕೇದಾರ್ ಜಾಧವ್ ಹಾಗೂ ಮಾಜಿ ನಾಯಕ ಎಂಎಸ್ ಧೋನಿ ಅವರ ಸಮಯೋಚಿತ ಬ್ಯಾಟಿಂಗ್‌ನ ನೆರವಿನಿಂದ ಭಾರತ ತಂಡ ಮೊದಲ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಆಸ್ಟ್ರೇಲಿಯವನ್ನು 6 ವಿಕೆಟ್‌ಗಳ ಅಂತರದಿಂದ ಮಣಿಸಿತು. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿ ಶುಭಾರಂಭ ಮಾಡಿತು.
ಗೆಲ್ಲಲು ಸಾಧಾರಣ ಸವಾಲು ಪಡೆದ ಭಾರತ 48.2 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 240 ರನ್ ಗಳಿಸಿತು.
ಭಾರತ 24ನೇ ಓವರ್‌ನಲ್ಲಿ 99 ರನ್‌ಗೆ ಅಗ್ರ ನಾಲ್ವರು ಆಟಗಾರರನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ ತಂಡಕ್ಕೆ ಆಸರೆಯಾದ ಜಾಧವ್(ಔಟಾಗದೆ 81, 87 ಎಸೆತ) ಹಾಗೂ ಧೋನಿ(ಔಟಾಗದೆ 59,72ಎಸೆತ) 5ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 141 ರನ್ ಜೊತೆಯಾಟ ನಡೆಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಜಾಧವ್ ಕೇವಲ 67 ಎಸೆತಗಳಲ್ಲಿ 5ನೇ ಅರ್ಧಶತಕ ಪೂರೈಸಿದರು. ಜಾಧವ್‌ಗೆ ಉತ್ತಮ ಸಾಥ್ ನೀಡಿದ ಧೋನಿ 68 ಎಸೆತಗಳಲ್ಲಿ ತನ್ನ 71ನೇ ಅರ್ಧಶತಕ ಗಳಿಸಿದರು.
ಆರಂಭಿಕ ಆಟಗಾರ ಶಿಖರ್ ಧವನ್(0) ತಾನೆದುರಿಸಿದ ಮೊದಲ ಎಸೆತದಲ್ಲೇ ಕೌಲ್ಟರ್-ನೀಲ್‌ಗೆ ವಿಕೆಟ್ ಒಪ್ಪಿಸಿದರು. ಆಗ ಇನ್ನೋರ್ವ ಆರಂಭಿಕ ಆಟಗಾರ ರೋಹಿತ್ ಶರ್ಮಾ(37, 66 ಎಸೆತ, 5 ಬೌಂಡರಿ)ಅವರೊಂದಿಗೆ 76 ರನ್ ಜೊತೆಯಾಟ ನಡೆಸಿದ ನಾಯಕ ವಿರಾಟ್ ಕೊಹ್ಲಿ(44,45 ಎಸೆತ, 6 ಬೌಂಡರಿ, 1 ಸಿಕ್ಸರ್)ತಂಡವನ್ನು ಆಧರಿಸಿದರು.
ಕೊಹ್ಲಿ ವಿಕೆಟನ್ನು ಉಡಾಯಿಸಿದ ಸ್ಪಿನ್ನರ್ ಆ್ಯಡಮ್ ಝಾಂಪ(2-19) ಆಸೀಸ್‌ಗೆ ಮೇಲುಗೈ ಒದಗಿಸಿದರು. ರೋಹಿತ್ ಶರ್ಮಾ 37 ರನ್‌ಗೆ ತನ್ನ ಹೋರಾಟ ಅಂತ್ಯಗೊಳಿಸಿದರು.
ಸ್ಥಳೀಯ ಆಟಗಾರ ಅಂಬಟಿ ರಾಯುಡು 19 ಎಸೆತಗಳನ್ನು ಎದುರಿಸಿ 13 ರನ್‌ಗೆ ವಿಕೆಟ್ ಒಪ್ಪಿಸಿ ನಿರಾಸೆಗೊಳಿಸಿದರು.