‘ಎಪ್ರಿಲ್ 2019-ಮಾರ್ಚ್ 2020’ ನಿರ್ಮಾಣ-ತಂತ್ರಜ್ಞಾನ ವರ್ಷ: ಪ್ರಧಾನಿ ಮೋದಿ ಘೋಷಣೆ
ಹೊಸದಿಲ್ಲಿ,ಮಾ.2: ‘ಎಪ್ರಿಲ್ 2019-ಮಾರ್ಚ್ 2020’ ಅನ್ನು ನಿರ್ಮಾಣ-ತಂತ್ರಜ್ಞಾನ ವರ್ಷವನ್ನಾಗಿ ಶನಿವಾರ ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ ಅವರು,ತ್ವರಿತ ನಗರೀಕರಣದಿಂದಾಗಿ ದೇಶದಲ್ಲಿ ಹೆಚ್ಚುತ್ತಿರುವ ವಸತಿ ಬೇಡಿಕೆಗಳನ್ನು ಪೂರೈಸಲು ಆಧುನಿಕ ತಂತ್ರಜ್ಞಾನದ ಬಳಕೆಗೆ ಒತ್ತು ನೀಡಿದರು.
2022ರ ವೇಳೆಗೆ ಪ್ರತಿ ಭಾರತೀಯನಿಗೂ ಇಟ್ಟಿಗೆ ನಿರ್ಮಿತ ಮನೆಯನ್ನು ಒದಗಿಸುವ ಸರಕಾರದ ಅಭಿಯಾನವನ್ನು ಪೂರ್ಣಗೊಳಿಸುವಲ್ಲಿ ಖಾಸಗಿ ಕ್ಷೇತ್ರದ ಬೆಂಬಲವನ್ನೂ ಅವರು ಕೋರಿದರು.
ಇಲ್ಲಿ ಕನ್‌ಸ್ಟ್ರಕ್ಷನ್ ಟೆಕ್ನಾಲಜಿ ಇಂಡಿಯಾ-2019 ಎಕ್ಸ್‌ಪೋ ಮತ್ತು ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮೋದಿ,ತನ್ನ ಸರಕಾರವು ಕೈಗೆಟಕುವ ಬೆಲೆಗಳಲ್ಲಿ ಮನೆಗಳ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಿದೆ,ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಸಂಬಂಧಿಸಿದ ಕಾನೂನುಗಳಲ್ಲಿ ಬದಲಾವಣೆಗಳನ್ನು ತಂದಿದೆ ಮತ್ತು ಇದೇ ವೇಳೆ ಅದಕ್ಕಾಗಿ ಕೌಶಲ್ಯವನ್ನು ಹೆಚ್ಚಿಸಿದೆ ಮತ್ತು ತಂತ್ರಜ್ಞಾನವನ್ನು ಉತ್ತಮಗೊಳಿಸಿದೆೆ ಎಂದು ಹೇಳಿದರು.
ಹಿಂದಿನ ಆಡಳಿತದ ಕೇವಲ 25 ಲಕ್ಷ ಮನೆಗಳಿಗೆ ಹೋಲಿಸಿದರೆ ಎನ್‌ಡಿಎ ಸರಕಾರವು 1.3 ಕೋಟಿ ಮನೆಗಳನ್ನು ನಿರ್ಮಿಸಿದೆ ಎಂದ ಅವರು,ತಮ್ಮ ಸ್ವಂತ ಮನೆಯನ್ನು ಹೊಂದುವ ಬಡ ಮತ್ತು ಮಧ್ಯಮ ಮರ್ಗದ ಜನರ ಕನಸನ್ನು ನನಸಾಗಿಸಲು ನಮ್ಮ ಬದ್ಧತೆಯೆಡೆಗೆ ನಾವೆಷ್ಟು ಗಂಭೀರವಾಗಿದ್ದೇವೆ ಎನ್ನುವುದನ್ನು ಇದು ತೋರಿಸುತ್ತದೆ ಎಂದರು.
ಮನೆಗಳು ಇತರ ಸೌಲಭ್ಯಗಳೊಂದಿಗೆ ನೀರು,ವಿದ್ಯುತ್ ಮತ್ತು ಉಜ್ವಲಾ ಸಂಪರ್ಕ(ಎಲ್‌ಪಿಜಿ)ಗಳನ್ನು ಹೊಂದಿರುವುವಂತೆ ನಾವು ನೋಡಿಕೊಳ್ಳುತ್ತಿದ್ದೇವೆ. ಕಳೆದ ನಾಲ್ಕೂವರೆ ವರ್ಷಗಳಲ್ಲಿ ಮನೆಗಳ ಗುಣಮಟ್ಟ ಮತ್ತು ಸ್ಥಳಾವಕಾಶಗಳನ್ನು ಹೆಚ್ಚಿಸಲಾಗಿದೆ,ಆದರೆ ಇನ್ನೂ ಬಹಳಷ್ಟನ್ನು ಮಾಡಬೇಕಿದೆ. ಅದಕ್ಕಾಗಿ ಖಾಸಗಿ ಕ್ಷೇತ್ರದ ಬೆಂಬಲವನ್ನು ನಾನು ಕೋರುತ್ತಿದ್ದೇನೆ,ನಾವೆಲ್ಲರೂ ಒಂದಾಗಿ ಶ್ರಮಿಸೋಣ ಮತ್ತು ಬಡವರಿಗೆ ನೆರವಾಗೋಣ ಎಂದರು.
ವಿಶ್ವದಲ್ಲಿ ಲಭ್ಯವಿರುವ ಇತ್ತೀಚಿನ ತಂತ್ರಜ್ಞಾನಗಳನ್ನು ಬಳಸಿಕೊಂಡು ವಸತಿ ಕ್ಷೇತ್ರಕ್ಕೆ ಹೊಸ ವೇಗವನ್ನು ನೀಡುವಂತೆ ಪಾಲುದಾರರಿಗೆ ಸೂಚಿಸಿದ ಮೋದಿ, ಅವರ ಸಲಹೆಗಳನ್ನು ತಿಳಿದುಕೊಳ್ಳಲು ಅವರೊಂದಿಗೆ ಮಾತುಕತೆಗಳನ್ನು ನಡೆಸಲು ಮತ್ತು ವಸತಿ ಕ್ಷೇತ್ರವನ್ನು ಇನ್ನಷ್ಟು ಕಂಪನಶೀಲಗೊಳಿಸಲು ಸರಕಾರವು ಆಸಕ್ತಿ ಹೊಂದಿದೆ ಎಂದರು.
ದೇಶದ ತ್ವರಿತ ನಗರೀಕರಣದಿಂದಾಗಿ ಹೆಚ್ಚಿನ ಮನೆಗಳು ಅಗತ್ಯವಾಗಿದೆ ಎಂದ ಅವರು,ಬೇಡಿಕೆಯನ್ನು ಪೂರೈಸಲು ಮತ್ತು ವಸತಿ ಕ್ಷೇತ್ರದಲ್ಲಿ ಪರಿವರ್ತನೆ ತರಲು ತನ್ನ ಸರಕಾರವು ಪ್ರಧಾನ ಮಂತ್ರಿ ಆವಾಸ್ ಯೋಜನಾ,ದೀನದಯಾಳ ಅಂತ್ಯೋದಯ ಯೋಜನಾ,ರಾಷ್ಟ್ರಿಯ ನಗರ ಜೀವನನೋಪಾಯ ಅಭಿಯಾನದಂತಹ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ ಎಂದರು.