ಎಲ್‌ಒಸಿಯಲ್ಲಿ ಪಾಕ್ ಸೇನಾ ಪಡೆಯಿಂದ ಶೆಲ್ ದಾಳಿ: ಮೂವರು ನಾಗರಿಕರು ಸಾವು

Update: 2019-03-02 17:13 GMT

ಜಮ್ಮು, ಮಾ. 2: ಜಮ್ಮು ಹಾಗೂ ಕಾಶ್ಮೀರದ ಪೂಂಛ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ ಶುಕ್ರವಾರ ಪಾಕಿಸ್ತಾನ ಸೇನಾ ಪಡೆ ನಡೆಸಿದ ಭಾರೀ ಶೆಲ್ ದಾಳಿಯಿಂದ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ ಹಾಗೂ ಇಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೋರ್ಟಾರ್ ಬಾಂಬ್, ಹೋವಿಟ್ಜರ್-105 ಎಂಎಂ ಸಹಿತ ಭಾರೀ ಗನ್‌ನಿಂದ ಪಾಕಿಸ್ತಾನ ಸೇನೆ ನಾಗರಿಕ ವಾಸ್ತವ್ಯದ ಪ್ರದೇಶದ ಮೇಲೆ ದಾಳಿ ನಡೆಸಿತು. ಇದಕ್ಕೆ ಭಾರತೀಯ ಸೇನೆ ಪರಿಣಾಮಕಾರಿಯಾಗಿ ಪ್ರತ್ಯುತ್ತರ ನೀಡಿತು ಎಂದು ಅವರು ತಿಳಿಸಿದ್ದಾರೆ.

ಪೂಂಛ್ ಜಿಲ್ಲೆಯ ಸಾಲೋತ್ರಿಯಲ್ಲಿ ಭಾರಿ ಶೆಲ್ ದಾಳಿಯಿಂದ ಹಲವು ಮನೆಗಳಿಗೆ ಹಾನಿಯಾಗಿದೆ. ಮನೆಯಲ್ಲಿದ್ದ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ಇನ್ನಿಬ್ಬರು ಗಾಯಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಪಾಕಿಸ್ತಾನದ ಶೆಲ್ ದಾಳಿಯಿಂದ 24ರ ಹರೆಯದ ರುಬಾನಾ ಕೌಸರ್, ಅವರ ಪುತ್ರ ಫಝನ್ (5) ಹಾಗೂ 9 ತಿಂಗಳ ಪುತ್ರಿ ಶಬ್ನಂ ಮೃತಪಟ್ಟಿದ್ದಾರೆ. ರುಬನಾ ಪತಿ ಮುಹಮ್ಮದ್ ಯೂನುಸ್ ಗಾಯಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. ಇದಕ್ಕಿಂತ ಮೊದಲು ಮಾನ್‌ಕೋಟೆ ಹಾಗೂ ಪೂಂಛ್ ಪ್ರದೇಶದಲ್ಲಿ ಪಾಕಿಸ್ತಾನ ಸೇನಾ ಪಡೆ ನಡೆಸಿದ ಶೆಲ್ ದಾಳಿಯಲ್ಲಿ ಗಾಯಗೊಂಡ ಮಹಿಳೆಯನ್ನು ನಸೀಮಾ ಅಖ್ತರ್ ಎಂದು ಗುರುತಿಸಲಾಗಿದೆ.

ಸಾಲೋತ್ರಿ ಹಾಗೂ ಮಾನ್‌ಕೋಟೆ ಅಲ್ಲದೆ, ಪೂಂಛ್ ಜಿಲ್ಲೆಯ ಕೃಷ್ಣಗಾಟಿ ಹಾಗೂ ಬಾಲಕೋಟೆ ಪ್ರದೇಶದಲ್ಲಿ ಪಾಕಿಸ್ತಾನ ಸೇನಾ ಪಡೆ ಶೆಲ್ ದಾಳಿ ನಡೆಸಿತ್ತು.

ಪಾಕಿಸ್ತಾನ ಸೇನಾ ಪಡೆ ಕದನ ವಿರಾಮ ಉಲ್ಲಂಘಿಸಿ ರಾಜೋರಿ ಹಾಗೂ ಪೂಂಛ್ ಜಿಲ್ಲೆಗಳಲ್ಲಿ ಶೆಲ್ ದಾಳಿ ನಡೆಸುತ್ತಿರುವುದು ಇದು ಸತತ 8ನೇ ದಿನ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News