ಮೋದಿ ಜೀವನಾಧಾರಿತ ಚಿತ್ರ: ಗೋಧ್ರಾ ಘಟನೆ ಪುನರ್ ಸೃಷ್ಟಿಸಲು ರೈಲುಬೋಗಿಗೆ ಬೆಂಕಿ

Update: 2019-03-04 10:16 GMT

ಹೊಸದಿಲ್ಲಿ, ಮಾ. 4: ಪ್ರಧಾನಿ ನರೇಂದ್ರ ಮೋದಿಯ ಜೀವನಾಧಾರಿತ ಚಿತ್ರಕ್ಕಾಗಿ 2002ರ ಗೋಧ್ರಾ ಘಟನೆಯನ್ನು ಪುನರ್ ಸೃಷ್ಟಿಸುವುದಕ್ಕಾಗಿ ಗುಜರಾತ್ ನ ವಡೋದರಾ ರೈಲು ನಿಲ್ದಾಣದಲ್ಲಿ ರವಿವಾರ ರೈಲೊಂದರ ಬೋಗಿಗೆ ಬೆಂಕಿ ಹಚ್ಚಲಾಗಿದೆ.

ಪಶ್ಚಿಮ ರೈಲ್ವೆ ಹಾಗೂ ವಡೋದರಾ ಅಗ್ನಿಶಾಮಕ ಇಲಾಖೆ ಈ  ದೃಶ್ಯದ ಚಿತ್ರೀಕರಣಕ್ಕಾಗಿ ಚಿತ್ರ ನಿರ್ಮಾಣ ಸಂಸ್ಥೆ ಬೆಂಚ್ ಮಾರ್ಕ್ ಪ್ರೊಡಕ್ಷನ್ಸ್ ಗೆ ಅನುಮತಿ ನೀಡಿದ್ದವೆಂದು ಹೇಳಲಾಗಿದೆ. ಈ ಚಿತ್ರವನ್ನು 2019ರ ಲೋಕಸಭಾ ಚುನಾವಣೆಗಿಂತ ಮುನ್ನ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಗೊಳಿಸಲಾಗುವುದು ಎಂದು ಹೇಳಲಾಗಿದೆ.

''ಸಾಕ್ಷ್ಯ ಚಿತ್ರದ ಚಿತ್ರೀಕರಣಕ್ಕಾಗಿ ಇಲ್ಲಿ ಅನುಮತಿ ನೀಡಲಾಗಿತ್ತು. ವಿಶ್ವಾಮಿತ್ರಿ ರೈಲು ನಿಲ್ದಾಣದ ನ್ಯಾರೋ ಗೇಜ್ ನಲ್ಲಿ ಚಿತ್ರೀಕರಣ ನಡೆಸಲಾಯಿತು. ಚಿತ್ರೀಕರಣ ವೇಳೆ ರೈಲು ಸೇವೆಗಳು ಬಾಧಿತವಾಗಿಲ್ಲ. ಚಿತ್ರೀಕರಣಕ್ಕಾಗಿ ಆತ್ಯವಿದ್ದ ಬೋಗಿಯನ್ನು ನಾವೇ ಒದಗಿಸಿದ್ದೆವು. ಅದೊಂದು ನಿರುಪಯೋಗಿ ಅಣಕು ಪ್ರದರ್ಶನದ ಬೋಗಿಯಾಗಿತ್ತು'' ಎಂದು ರೈಲ್ವೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಖೇಮ್‍ರಾಜ್ ಮೀನಾ ಹೇಳಿದ್ದಾರೆ.

''ಈ ದೃಶ್ಯದ ಚಿತ್ರೀಕರಣಕ್ಕಾಗಿ ರೈಲ್ವೆ ಇಲಾಖೆ ಬೋಗಿಯನ್ನು ಒದಗಿಸಿತ್ತು. ಬೆಂಕಿ ಹತ್ತಿಕೊಂಡಿದ್ದ ರೈಲಿನ ಹೊರಗಿನ ದೃಶ್ಯವನ್ನು ಇಲ್ಲಿ ಚಿತ್ರೀಕರಿಸಲಾಗಿದೆ. ರೈಲಿನ ಒಳಗಿನ ದೃಶ್ಯವನ್ನು ಮುಂಬೈಯ ಸೆಟ್ ನಲ್ಲಿ ಚಿತ್ರೀಕರಿಸಲಾಗುವುದು. ಈ ನಿರ್ದಿಷ್ಟ ದೃಶ್ಯವು ಮೋದಿ ಎದುರಿಸಿದ ಸವಾಲುಗಳ ಬಗ್ಗೆ  ವಿವರಿಸುತ್ತದೆ'' ಎಂದು  ಚಿತ್ರೀಕರಣದ ಉಸ್ತುವಾರಿ ನೋಡಿಕೊಂಡಿದ್ದ ಜಯರಾಜ್ ಗಢ್ವಿ ಹೇಳಿದ್ದಾರೆ.

ತಮಗೆ ಈ ಸಾಕ್ಷ್ಯಚಿತ್ರದ ಬಗ್ಗೆ ಏನೂ ತಿಳಿದಿಲ್ಲ ಎಂದು ವಡೋದರಾದ ಬಿಜೆಪಿ ಸಂಸದ ರಂಜನ್ ಭಟ್ಟ್ ಹೇಳಿದ್ದಾರೆ.

ಅತ್ತ ಪಶ್ಚಿಮ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ರವೀನ್ ಭಾಸ್ಕರ್ ಸುದ್ದಿ ಸಂಸ್ಥೆಯೊಂದರ ಜತೆ ಮಾತನಾಡುತ್ತಾ ''ತಮ್ಮ ಕಚೇರಿಗೆ ಚಿತ್ರದ ಸ್ಕ್ರಿಪ್ಟ್ ತೋರಿಸಲಾಗಿತ್ತು ಹಾಗೂ ಅದರಲ್ಲಿ ಗೋಧ್ರಾ ಉಲ್ಲೇಖವಿರಲಿಲ್ಲ. ನನಗೆ ತಿಳಿದಿರುವ ಪ್ರಕಾರ ಪ್ರಧಾನಿ ರೈಲ್ವೆ ಪ್ಲಾಟ್‍ಫಾರ್ಮ್ ನಲ್ಲಿ ಚಹಾ ಮಾರುತ್ತಿರುವ ದೃಶ್ಯ ಪುನರ್ ಸೃಷ್ಟಿಸಲು ಅವರು ಬಯಸಿದ್ದರು. ರೈಲ್ವೆಯ ಅಥವಾ ದೇಶವನ್ನು ಕೆಟ್ಟದಾಗಿ ಬಿಂಬಿಸುವ ಯಾವುದಕ್ಕೂ ಅನುಮತಿಸಲಾಗುವುದಿಲ್ಲ'' ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News