ಸೈನಿಕನ ವೇಷದಲ್ಲಿ ಚುನಾವಣಾ ಪ್ರಚಾರ ನಡೆಸಿದ ಬಿಜೆಪಿ ಸಂಸದ !
ಹೊಸದಿಲ್ಲಿ, ಮಾ. 4: ದಿಲ್ಲಿಯಲ್ಲಿ ನಡೆದ ಪಕ್ಷದ ರ‍್ಯಾಲಿಯಲ್ಲಿ ಸೇನೆಯ ಸಮವಸ್ತ್ರ ಧರಿಸಿ ಪಾಲ್ಗೊಂಡಿರುವುದಕ್ಕಾಗಿ ಬಿಜೆಪಿಯ ವರಿಷ್ಠ ಮನೋಜ್ ತಿವಾರಿ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.
ಈಶಾನ್ಯ ದಿಲ್ಲಿಯ ಲೋಕಸಭಾ ಕ್ಷೇತ್ರದ ಯಮುನಾ ವಿಹಾರ್ ಪ್ರದೇಶದಿಂದ ಶನಿವಾರ ಆರಂಭವಾದ ಬಿಜೆಪಿಯ ಬೈಕ್ ರ್ಯಾಲಿಗೆ ತಿವಾರಿ ಅವರು ಸೇನೆಯ ಸಮವಸ್ತ್ರ ಧರಿಸಿ ಹಸಿರು ನಿಶಾನೆ ತೋರಿಸಿದ್ದರು.
ಟೀಕೆಗೆ ಪ್ರತಿಕ್ರಿಯಿಸಿರುವ ತಿವಾರಿ, ‘‘ನನಗೆ ಸೇನೆಯ ಬಗ್ಗೆ ಹೆಮ್ಮೆ ಇದೆ. ಅದಕ್ಕಾಗಿ ಸೇನೆಯ ಸಮವಸ್ತ್ರ ಧರಿಸಿದೆ. ನಾನು ಭಾರತೀಯ ಸೇನೆಗೆ ಸೇರಿದವನು ಅಲ್ಲ. ಆದರೆ, ನಾನು ನನ್ನ ಐಕ್ಯತೆಯ ಭಾವನೆಯನ್ನು ಅಭಿವ್ಯಕ್ತಿಸಿದ್ದೇನೆ. ಇದು ಅವಮಾನ ಎಂದು ಯಾಕೆ ಪರಿಗಣಿಸಬೇಕು ? ನನಗೆ ಸೇನೆಯ ಮೇಲೆ ಅತೀವ ಅಭಿಮಾನ ಇದೆ. ಒಂದು ವೇಳೆ ನಾಳೆ ನಾನು ನೆಹರೂ ಅವರ ಜಾಕೆಟ್ ಧರಿಸಿದರೆ, ಅದು ಜವಾಹರ್‌ಲಾಲ್ ನೆಹರೂ ಅವರಿಗೆ ಅವಮಾನ ಆಗುತ್ತದೆಯೇ ?’’ ಎಂದು ಅವರು ಪ್ರಶ್ನಿಸಿದ್ದಾರೆ.
ಆದರೆ, ತೀವಾರಿ ರ‍್ಯಾಲಿಯ ಸಂದರ್ಭ ಸೇನೆಯ ಸಮವಸ್ತ್ರ ಧರಿಸಿರಿರುವುದನ್ನು ತೃಣಮೂಲ ಕಾಂಗ್ರೆಸ್‌ನ ಸಂಸದ ಡೆರಿಕ್ ಒಬ್ರಿಯಾನ್ ಅವರು ‘ಅವಮಾನಕರ ವರ್ತನೆ’ ಎಂದು ಕರೆದಿದ್ದಾರೆ.
‘‘ಇದು ಅವಮಾನಕರ. ಬಿಜೆಪಿ ಸಂಸದ ಬಿಜೆಪಿಯ ದಿಲ್ಲಿಯ ಅಧ್ಯಕ್ಷರಾಗಿರುವ ಮನೋಜ್ ತೀವಾರಿ ಸೇನಾ ಪಡೆಯ ಸಮವಸ್ತ್ರ ಧರಿಸಿ ಮತ ಯಾಚಿಸಿದ್ದಾರೆ. ಬಿಜೆಪಿ-ಮೋದಿ-ಶಾ ನಮ್ಮ ಜವಾನರಿಗೆ ಅವಮಾನ ಮಾಡಿದ್ದಾರೆ ಹಾಗೂ ಅವರನ್ನು ರಾಜಕೀಯಗೊಳಿಸಿದ್ದಾರೆ. ಅನಂತರ ದೇಶ ಭಕ್ತಿ ಬಗ್ಗೆ ಭಾಷಣ ಬಿಗಿಯುತ್ತಾರೆ’’ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಗುರಿಯಾಗಿರಿಸಿ ಟೀಕಿಸಿದ್ದಾರೆ.