250 ಮಂದಿ ಸತ್ತಿದ್ದಾರೆಂದು ಅಮಿತ್ ಶಾಗೆ ಸೇನೆ ಹೇಳಿತೇ: ಕಪಿಲ್ ಸಿಬಲ್ ಪ್ರಶ್ನೆ
ಹೊಸದಿಲ್ಲಿ, ಮಾ. 4: ‘ಬಾಲಕೋಟ್‌ನಲ್ಲಿ ಉಗ್ರರು ಹತರಾಗಿರುವುದಕ್ಕೆ ಯಾವುದೇ ಪುರಾವೆ ಇಲ್ಲ’ ಎಂಬ ಅಂತಾರಾಷ್ಟ್ರೀಯ ಮಾಧ್ಯಮಗಳ ವರದಿಯನ್ನು ಉಲ್ಲೇಖಿಸಿರುವ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್, ಅಲ್ಲಿ ಬಲಿಯಾದ ಉಗ್ರರ ಸಂಖ್ಯೆಯನ್ನು ಅವರು ಹೇಗೆ ಶೂನ್ಯಕ್ಕೆ ಇಳಿಸಿದರು ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಲೋಕಸಭೆ ಚುನಾವಣೆಯಲ್ಲಿ ಗಮನದಲ್ಲಿ ಇರಿಸಿ ಭಯೋತ್ಪಾದನೆಯೊಂದಿಗೆ ರಾಜಕೀಯ ಮಾಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.
‘‘ನಿಮ್ಮ ಸಚಿವರು 300 ಉಗ್ರರು ಸತ್ತಿದ್ದಾರೆ, 400 ಉಗ್ರರು ಸತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಈ ಮಾಹಿತಿ ನಿಮಗೆ ಎಲ್ಲಿಂದ ದೊರಕಿತು. ಲೋಕಸಭೆಯನ್ನು ಗಮನದಲ್ಲಿ ಇರಿಸಿಕೊಂಡು ನೀವು ಈ ಸಂಖ್ಯೆಯನ್ನು ನೀಡುತ್ತಿದ್ದೀರಾ ? ಅವರು, ಯಾರೂ ಹತ್ಯೆಯಾಗಿಲ್ಲ ಎಂದು ಹೇಳುತ್ತಿದ್ದಾರೆ’’ ಎಂದು ಸಿಬಲ್ ಹೇಳಿದರು.
ಪಾಕಿಸ್ತಾನದ ಪಖ್ತುಂಖ್ವಾ ಪ್ರಾಂತ್ಯದ ಬಾಲಕೋಟ್‌ನ ಜೈಶೆ ಮುಹಮ್ಮದ್ ಭಯೋತ್ಪಾದಕ ಶಿಬಿರದ ಮೇಲೆ ಭಾರತೀಯ ವಾಯು ಪಡೆ ನಡೆಸಿದ ದಾಳಿಯಲ್ಲಿ 250 ಉಗ್ರರು ಹತರಾಗಿದ್ದಾರೆ ಎಂದು ಅಮಿತ್ ಶಾ ಹೇಳಿದ ಒಂದು ದಿನದ ಬಳಿಕ ಸಿಬಲ್ ಈ ಹೇಳಿಕೆ ನೀಡಿದ್ದಾರೆ.
‘‘ಅಮಿತ್ ಶಾ ಅವರಿಗೆ ಈ ಸಂಖ್ಯೆಯನ್ನು ಯಾರು ನೀಡಿದರು. 250 ಉಗ್ರರು ಹತರಾಗಿದ್ದಾರೆ ಎಂದು ಸೇನೆ ಹೇಳಿದೆಯೇ ? ಭಾರತ ಸರಕಾರ ಹೇಳಿದೆಯೇ ?. ಅವರು ರಾಜಕೀಯ ಪಕ್ಷವೊಂದರ ಅಧ್ಯಕ್ಷ ಮಾತ್ರ. ಸರಕಾರ ಹಾಗೂ ಸೇನೆ ಈ ಮಾಹಿತಿಯನ್ನು ಅವರೊಂದಿಗೆ ಹಂಚಿಕೊಂಡಿದ್ದರೆ, ಅದು ದೇಶದ ಪ್ರತಿಪಕ್ಷದ ನಾಯಕರೊಂದಿಗೆ ಯಾಕೆ ಹಂಚಿಕೊಂಡಿಲ್ಲ? ಅಮಿತ್ ಶಾ ಅವರು ಭಯೋತ್ಪಾದನೆಯೊಂದಿಗೆ ರಾಜಕೀಯ ಮಾಡಬಾರದು. ಶಾ ಹಾಗೂ ಮೋದಿ ಒಂದೇ ರೀತಿ ಮಾಡುತ್ತಿದ್ದಾರೆ. ಅವರು ಹೀಗೆ ಮಾಡುತ್ತಿರುವುದು ಯಾಕೆ ಎಂಬುದು ನಮಗೆ ಗೊತ್ತಿದೆ. ಲೋಕಸಭಾ ಚುನಾವಣೆ ಸನ್ನಿಹಿತವಾಗಿರುತ್ತಿರುವುದರಿಂದ ಅವರು ಹಾಗೆ ಮಾಡುತ್ತಿದ್ದಾರೆ.’’ ಎಂದು ಸಿಬಲ್ ತಿಳಿಸಿದ್ದಾರೆ.
ಬಾಲಕೋಟ್‌ನಲ್ಲಿ ಉಗ್ರರು ಹತರಾಗಿರುವುದಕ್ಕೆ ಯಾವುದೇ ಪುರಾವೆ ಇಲ್ಲ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ಹೇಗೆ ಹೇಳಿತು ? ಅಂತಾರಾಷ್ಟ್ರೀಯ ಮಾಧ್ಯಮಗಳು ಪಾಕಿಸ್ತಾನ ಪರವೇ ? ಅಂತಾರಾಷ್ಟ್ರೀಯ ಮಾಧ್ಯಮಗಳನ್ನು ಪ್ರಧಾನಿ ಅವರು ಪಾಕಿಸ್ತಾನ ಪರ ಹಾಗೂ ಭಾರತ ವಿರೋಧಿ ಎಂದು ಕರೆಯಬಹುದೇ ?
ಕಪಿಲ್ ಸಿಬಲ್, ಕಾಂಗ್ರೆಸ್ ನಾಯಕ