ಒಂದೇ ಒಂದು ರಫೇಲ್ ಜೆಟ್ ನಿಯೋಜಿಸಿಲ್ಲ ಯಾಕೆ ?: ಮೋದಿಯನ್ನು ಪ್ರಶ್ನಿಸಿದ ಮಾಯಾವತಿ
ಲಕ್ನೋ, ಮಾ. 4: ರಫೇಲ್ ಯುದ್ಧ ವಿಮಾನವನ್ನು ಪಾಕಿಸ್ತಾನದ ಜೈಶೆ ಭಯೋತ್ಪಾದಕರ ಶಿಬಿರದ ಮೇಲೆ ಬಳಸಿದ್ದರೆ ಉತ್ತಮ ಫಲಿತಾಂಶ ಸಿಗುತ್ತಿತ್ತು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯನ್ನು ಟೀಕಿಸಿರುವ ಬಿಎಸ್‌ಪಿ ವರಿಷ್ಠೆ ಮಾಯಾವತಿ, ಕೇಂದ್ರದಲ್ಲಿರುವ ಬಿಜೆಪಿ ಸರಕಾರ ಐಎಎಫ್‌ಗೆ ಒಂದೇ ಒಂದು ರಫೇಲ್ ಯುದ್ಧ ವಿಮಾನವನ್ನು ಯಾಕೆ ನಿಯೋಜಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.
ಪ್ರಧಾನಿ ಮೋದಿ ಅವರು ರ್ಯಾಲಿ ಸಂದರ್ಭ ಮಾತನಾಡಿ, ಪಾಕಿಸ್ತಾನದ ಭಯೋತ್ಪಾದಕರ ಶಿಬಿರದ ವಿರುದ್ಧ ಯುದ್ಧ ವಿಮಾನಗಳನ್ನು ಬಳಸಿದ್ದರೆ ಉತ್ತಮ ಫಲಿತಾಂಶ ದೊರಕುತ್ತಿತ್ತು ಎಂದು ಹೇಳಿದ್ದರು. ಆದರೆ, ಸರಕಾರ ಇದುವರೆಗೆ ಒಂದೇ ಒಂದು ರಫೇಲ್ ಯುದ್ಧ ವಿಮಾನವನ್ನು ಐಎಎಫ್‌ಗೆ ನಿಯೋಜಿಸಿಲ್ಲ. ದೇಶದ ಭದ್ರತೆ ಹಾಗೂ ಸುರಕ್ಷೆ ವಿಷಯದ ಬಗ್ಗೆ ಬಿಜೆಪಿಗೆ ಯಾಕಿಷ್ಟು ನಿರ್ಲಕ್ಷತೆ ಎಂದು ಪ್ರಶ್ನಿಸಿ ಮಾಯಾವತಿ ಟ್ವೀಟ್ ಮಾಡಿದ್ದಾರೆ.
ಜಮ್ಮು ಹಾಗೂ ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಿಂದ 80 ಕಿ.ಮೀ. ದೂರದಲ್ಲಿರುವ ಬಾಲಕೋಟ್ ನಲ್ಲಿ ಜೈಶೆ ಮುಹಮ್ಮದ್ ಶಿಬಿರದ ಮೇಲೆ ಭಾರತೀಯ ವಾಯು ಪಡೆ ಕಳೆದ ವಾರ ದಾಳಿ ನಡೆಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ, ಈ ದಾಳಿಯಲ್ಲಿ ರಫೇಲ್ ಯುದ್ಧ ವಿಮಾನಗಳನ್ನು ಬಳಸಿದ್ದರೆ, ಉತ್ತಮ ಫಲಿತಾಂಶ ಸಿಗುತ್ತಿತ್ತು ಎಂದಿದ್ದರು.
ಈ ಹಿಂದಿನ ಸರಕಾರದ ಸ್ವಹಿತಾಸಕ್ತಿಯ ಕಾರಣಕ್ಕೆ ರಪೇಲ್ ಜೆಟ್ ಒಪ್ಪಂದ ಅಂತಿಮಗೊಂಡಿರಲಿಲ್ಲ. ಆದರೆ, ಈಗ ರಾಜಕೀಯ ಕಾರಣ ಒಪ್ಪಂದಕ್ಕೆ ಅಡ್ಡಿಯಾಗುತ್ತಿದೆ ಎಂದು ಕೂಡ ನರೇಂದ್ರ ಮೋದಿ ಹೇಳಿದ್ದರು.