‘ಕರಾಚಿ’ಯಲ್ಲೂ ಆಯುಷ್ಮಾನ್ ಭಾರತ್: ಮತ್ತೆ ಪ್ರಧಾನಿ ಮೋದಿ ಎಡವಟ್ಟು
ಹೊಸದಿಲ್ಲಿ,ಮಾ.4: ಸೋಮವಾರ ತನ್ನ ಮಾತಿನ ಮಧ್ಯೆ ಎಡವಿದ ಪ್ರಧಾನಿ ಮೋದಿ ಕೊಚ್ಚಿ ಬದಲು ಕರಾಚಿ ಎಂದು ಸಂಬೋಧಿಸುವ ಮೂಲಕ ಪ್ರಮಾದ ಸೃಷ್ಟಿಸಿದರೂ ಕೂಡಲೇ ತನ್ನ ಮಾತನ್ನು ಸರಿಪಡಿಸಿದರು.
ಗುಜರಾತ್‌ನ ಜಾಮ್‌ನಗರದಲ್ಲಿ ಗುರು ಗೋವಿಂದ್ ಸಿಂಗ್ ಆಸ್ಪತ್ರೆಯ 750 ಹಾಸಿಗೆಯ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಮೋದಿ, ಆಯುಷ್ಮಾನ್ ಭಾರತ್ ಯೋಜನೆಯ ಉಪಯೋಗಗಳ ಬಗ್ಗೆ ಮಾತನಾಡುತ್ತಾ ಈ ಯೋಜನೆಯಿಂದ ಇಂದು ಜಾಮ್‌ನಗರದ ವ್ಯಕ್ತಿ ದೇಶದ ಯಾವ ಮೂಲೆಯಲ್ಲೂ, ಅದು ಕೊಲ್ಕತಾ ಆಗಲೀ ಅಥವಾ ಕರಾಚಿಯಾಗಲಿ ಚಿಕಿತ್ಸೆ ಪಡೆದುಕೊಳ್ಳಲು ಸಾಧ್ಯವಿದೆ ಎಂದು ತಿಳಿಸಿದರು. ಆದರೆ ಕೂಡಲೇ ಅದೇ ಉಸಿರಿನಲ್ಲಿ ತನ್ನ ತಪ್ಪನ್ನು ಸರಿಪಡಿಸಿದ ಪ್ರಧಾನಿ, ನಾನು ಕೊಚ್ಚಿ ಬದಲು ಕರಾಚಿ ಎಂದು ಹೇಳಿದೆ. ಈ ದಿನಗಳಲ್ಲಿ ನನ್ನ ತಲೆಯಲ್ಲಿ ನೆರೆರಾಷ್ಟ್ರದ ಬಗ್ಗೆಯೇ ಯೋಚನೆ ತುಂಬಿದೆ. ಆದರೆ ವಾಯುದಾಳಿಯೂ ಅಗತ್ಯವಾಗಿತ್ತು ಎಂದು ತಿಳಿಸಿದ್ದಾರೆ.
ನಂತರ, ಇಂತಹ ದಾಳಿ ನಡೆಸಬೇಕೇ ಬೇಡವೇ ಎಂದು ಮೋದಿ ನೆರೆದಿದ್ದ ಜನರನ್ನು ಪ್ರಶ್ನಿಸಿದಾಗ ಜನರು ಚಪ್ಪಾಳೆ ತಟ್ಟಿ ತಮ್ಮ ಸಮ್ಮತಿ ಸೂಚಿಸಿದರು.