ಬೆಳೆ ತ್ಯಾಜ್ಯ ದಹನದಿಂದ ವಾಯು ಮಾಲಿನ್ಯ: ಉತ್ತರ ಭಾರತದಲ್ಲಿ ವಾರ್ಷಿಕ 2.12 ಲಕ್ಷ ಕೋ. ರೂ. ನಷ್ಟ

Update: 2019-03-04 16:37 GMT

ಹೊಸದಿಲ್ಲಿ, ಮಾ. 4: ಬೆಳೆ ತ್ಯಾಜ್ಯ ದಹನದಿಂದ ಉಂಟಾಗುವ ವಾಯು ಮಾಲಿನ್ಯದಿಂದ ಪಂಜಾಬ್, ಹರ್ಯಾಣ ಹಾಗೂ ದಿಲ್ಲಿಯಲ್ಲಿ ವಾರ್ಷಿಕ ಸುಮಾರು 2.12 ಲಕ್ಷ ಕೋಟಿ ರೂ. ನಷ್ಟ ಉಂಟಾಗಿದೆ ಹಾಗೂ ತೀವ್ರ ಶ್ವಾಸಕೋಸದ ಸೋಂಕಿನ ಅಪಾಯ ಮೂರು ಪಟ್ಟು ಹೆಚ್ಚಾಗಿದೆ ಎಂದು ಸೋಮವಾರ ಪ್ರಕಟಗೊಂಡ ಅಧ್ಯಯನವೊಂದು ತಿಳಿಸಿದೆ.

ಭಾರತದ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ವಾಸಿಸುವ 2,50,000 ಅಧಿಕ ಜನರ ಆರೋಗ್ಯದ ದತ್ತಾಂಶ ಆಧಾರವಾಗಿರಿಸಿ ಅಂತಾರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆ ಈ ಅಧ್ಯಯನ ನಡೆಸಿದೆ.

ಸಂಶೋಧಕರು ಬೆಳೆ ತ್ಯಾಜ್ಯ ದಹನದ ಉಪಗ್ರಹ ಮ್ಯಾಪ್‌ನ ದತ್ತಾಂಶ ಬಳಸಿಕೊಂಡಿದ್ದಾರೆ ಹಾಗೂ ಬೆಳೆ ತ್ಯಾಜ್ಯ ದಹನದಿಂದ ದುಷ್ಪರಿಣಾಮ ಉಂಟಾದ ಪ್ರದೇಶದ ಆರೋಗ್ಯ ದತ್ತಾಂಶದೊಂದಿಗೆ ದುಷ್ಪರಿಣಾಮ ಉಂಟಾಗದ ಪ್ರದೇಶದೊಂದಿಗೆ ಹೋಲಿಸಿದ್ದಾರೆ.

ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿ ಬೆಳೆ ತ್ಯಾಜ್ಯ ದಹನ ಮಾಡುತ್ತಿಲ್ಲ ಹಾಗೂ ದೀಪಾವಳಿ ಸಂದರ್ಭ ಇಲ್ಲಿ ಪಟಾಕಿ ಸಿಡಿಸುವುದು ಕೂಡ ತುಂಬಾ ಕಡಿಮೆ ಇದೆ. ಇದರಿಂದ ಶ್ವಾಸಕೋಶ ಸಂಬಂಧಿ ಸೋಂಕಿನ ಪ್ರಮಾಣ ತುಂಬಾ ಕಡಿಮೆ. ಭಾರತದಲ್ಲಿ ಪಟಾಕಿ ಸಿಡಿಸುವುದರಿಂದ ಉಂಟಾಗುವ ವಾಯು ಮಾಲಿನ್ಯದಿಂದ ಮಾತ್ರ ವರ್ಷದಲ್ಲಿ ಸುಮಾರು 49,600 ಕೋಟಿ ರೂಪಾಯಿ ಆರ್ಥಿಕ ನಷ್ಟ ಉಂಟಾಗುತ್ತಿದೆ ಎಂದು ಅಧ್ಯಯನ ತಿಳಿಸಿದೆ.

ಉತ್ತರ ಭಾರತದಲ್ಲಿ ಚಳಿಗಾಲದ ತಿಂಗಳಲ್ಲಿನ ತೀವ್ರ ವಾಯು ಮಾಲಿನ್ಯ ಗಂಭೀರ ಸಾರ್ವಜನಿಕ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತಿದೆ ಎಂದು ಅಧ್ಯಯನದ ಸಹ ಲೇಖಕ ಸುಮನ್ ಚಕ್ರವರ್ತಿ ಹೇಳಿದ್ದಾರೆ.

ಬೆಳೆ ತ್ಯಾಜ್ಯ ದಹನದಿಂದ ಮಾಲಿನ್ಯ ಹೆಚ್ಚಾಗುತ್ತಿದೆ. ಕೂಡಲೇ ಕ್ರಮಗಳನ್ನು ತೆಗೆದುಕೊಳ್ಳದೇ ಇದ್ದರೆ, ಆರೋಗ್ಯ ಸೇವೆ ವೆಚ್ಚ ಏರಿಕೆಯಾಗಲಿದೆ. ಬೆಳೆ ತ್ಯಾಜ್ಯ ದಹನದಿಂದ ಜನರ ಉತ್ಪಾದನಾ ಸಾಮರ್ಥ್ಯ ಕೂಡ ಕಡಿಮೆ ಆಗಲಿದೆ. ಇದು ಆರ್ಥಿಕತೆ ಹಾಗೂ ಆರೋಗ್ಯದ ಮೇಲೆ ದೀರ್ಘ ಕಾಲದ ದುಷ್ಪರಿಣಾಮ ಬೀರಲಿದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News