×
Ad

ವಿಮಾನದಿಂದ ಆಹಾರ ಕಳವು: ಏರ್ ಇಂಡಿಯಾ ನಾಲ್ವರು ಉದ್ಯೋಗಿಗಳ ವಿರುದ್ಧ ಕ್ರಮ

Update: 2019-03-04 22:53 IST

ಹೊಸದಿಲ್ಲಿ,ಮಾ.4: ವಿಮಾನಗಳಿಂದ ಆಹಾರ ಮತ್ತು ದಿನಸಿಗಳನ್ನು ಕಳವು ಮಾಡಿದ ಆರೋಪ ಹೊತ್ತಿರುವ ಏರ್ ಇಂಡಿಯಾದ ನಾಲ್ವರು ಉದ್ಯೋಗಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸುವುದಾಗಿ ರಾಷ್ಟ್ರೀಯ ವೈಮಾನಿಕ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನಗಳು ನಿಲ್ದಾಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಗ್ರೌಂಡ್ ಸಿಬ್ಬಂದಿ ಮತ್ತು ಅಧಿಕಾರಿಗಳು ಪ್ರಯಾಣಿಕರಿಗೆ ನೀಡದೆ ಉಳಿದಿರುವ ಆಹಾರ ಮತ್ತು ಇತರ ದಿನಸಿಗಳನ್ನು ತಮ್ಮ ವೈಯಕ್ತಿಕ ಉಪಯೋಗಕ್ಕೆ ತೆಗೆಯುತ್ತಾರೆ ಎಂದು 2017ರ ಆಗಸ್ಟ್‌ನಲ್ಲಿ ಏರ್ ಇಂಡಿಯಾ ಮುಖ್ಯಸ್ಥ ಮತ್ತು ವ್ಯವಸ್ಥಾಪನಾ ನಿರ್ದೇಶಕ ಅಶ್ವನಿ ಲೊಹಾನಿ ಹೊರಡಿಸಿದ ಆಂತರಿಕ ಅಧಿಸೂಚನೆಯಲ್ಲಿ ತಿಳಿಸಿದ್ದರು. ಈ ರೀತಿಯ ಕೃತ್ಯಗಳಲ್ಲಿ ಭಾಗಿಯಾಗುವ ಅಧಿಕಾರಿಗಳನ್ನು ಹುದ್ದೆಯಿಂದ ಅಮಾನತುಗೊಳಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದರು.

ಈ ಅಧಿಸೂಚನೆ ಹೊರಡಿಸಿದ ಸಮಯದಿಂದ, ಆಹಾರ ಕಳವು ಆರೋಪದಲ್ಲಿ ಏರ್ ಇಂಡಿಯಾ ಕ್ಯಾಟರಿಂಗ್ ವಿಭಾಗದ ಇಬ್ಬರು ಸಿಬ್ಬಂದಿ ಮತ್ತು ಇಬ್ಬರು ಕ್ಯಾಬಿನ್ ಸಿಬ್ಬಂದಿ ವಿರುದ್ಧ ಕ್ರಮ ತೆಗೆದುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಂಥ ಕೃತ್ಯಗಳಲ್ಲಿ ಭಾಗಿಯಾಗಿದ್ದ ಕ್ಯಾಟರಿಂಗ್ ವಿಭಾಗದ ಸಹಾಯಕ ವ್ಯವಸ್ಥಾಪಕ ಮತ್ತು ಹಿರಿಯ ಸಹಾಯಕನನ್ನು ಕ್ರಮವಾಗಿ 63 ಮತ್ತು ಮೂರು ದಿನಗಳ ಕಾಲ ಅಮಾನತುಗೊಳಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವರ್ಷ ಮಾರ್ಚ್‌ನಲ್ಲಿ ಹೊಸದಿಲ್ಲಿ-ಸಿಡ್ನಿ ವಿಮಾನದಲ್ಲಿ ಆಹಾರ ಕಳವು ಮಾಡಿದ ಆರೋಪದಲ್ಲಿ ಇಬ್ಬರು ಕ್ಯಾಬಿನ್ ಸಿಬ್ಬಂದಿಗೆ ಎಚ್ಚರಿಕೆ ನೀಡಲಾಗಿತ್ತು ಮತ್ತು ಅವರನ್ನು ದೇಶೀಯ ವಿಮಾನಕ್ಕೆ ವರ್ಗಾಯಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News