ಯಾವುದೇ ಯೋಜನೆಯಿಲ್ಲದೆ ನೀವು ಸೈನಿಕರನ್ನು ಸಾಯಲು ಕಳುಹಿಸುತ್ತೀದ್ದೀರಾ: ಮೋದಿಗೆ ಟಿಎಂಸಿ ಪ್ರಶ್ನೆ
ಹೊಸದಿಲ್ಲಿ,ಮಾ.4: ಪ್ರಧಾನಿ ನರೇಂದ್ರ ಮೋದಿ ಮತು ಬಿಜೆಪಿ ಅಧ್ಯಕ್ಷ ಅಮಿತ್ ಶಾರನ್ನು ತರಾಟೆಗೆ ತೆಗೆದುಕೊಂಡ ತೃಣಮೂಲ ಕಾಂಗ್ರೆಸ್, ಸಶಸ್ತ್ರಪಡೆಗಳನ್ನು ರಾಜಕೀಯ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಅರೋಪಿಸಿದೆ.
ಭಾರತೀಯ ವಾಯುಪಡೆ ಸತ್ತವರನ್ನು ಲೆಕ್ಕ ಹಾಕುವುದಿಲ್ಲ ಎಂದು ಏರ್ ಚೀಫ್ ಮಾರ್ಶಲ್ ಬಿ.ಎಸ್ ಧನೊವ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿದ ಪ್ರಧಾನ ಮಂತ್ರಿಗಳ ಕಚೇರಿ, ಸಶಸ್ತ್ರಪಡೆಗಳನ್ನು ಎಲ್ಲರೂ ನಂಬಬೇಕು ಮತ್ತು ಅವರ ಬಗ್ಗೆ ಹೆಮ್ಮೆಯಿರಬೇಕು ಎಂದು ತಿಳಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ತೃಣಮೂಲ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಡೆರೆಕ್ ಒಬ್ರಿಯಾನ್, ನಮಗೆ ಸಶಸ್ತ್ರಪಡೆಗಳ ಮೇಲೆ ವಿಶ್ವಾಸವಿದೆ ಮತ್ತು ಅವರ ಬಗ್ಗೆ ಹೆಮ್ಮೆಯೂ ಇದೆ. ಆದರೆ ನಾವು ಜುಮ್ಲಾ ಜೋಡಿಯನ್ನು ನಂಬುವುದಿಲ್ಲ. ನೀವು ನಮ್ಮ ಸೈನಿಕರನ್ನು ಯಾವುದೇ ಯೋಜನೆಯಿಲ್ಲದೆ ಅಥವಾ ಉದ್ದೇಶವಿಲ್ಲದೆ ಸಾಯಲು ಕಳುಹಿಸುತ್ತಿದ್ದೀರಾ?, ಅಥವಾ ನಿಮ್ಮ ಉದ್ದೇಶ ಕೇವಲ ಚುನಾವಣೆ ಗೆಲ್ಲುವುದೇ? ಹುತಾತ್ಮ ಯೋಧರ ಚಿತ್ರಗಳನ್ನು ನಿಮ್ಮ ಚುನಾವಣಾ ರ್ಯಾಲಿಗಳಲ್ಲಿ ನೀವು ಬಳಸುತ್ತಿರುವುದು ನಾಚಿಕೆಗೇಡು ಎಂದು ಟೀಕಿಸಿದ್ದರು.