×
Ad

ಸಂಕಲ್ಪ ರ‍್ಯಾಲಿಯಲ್ಲಿ ಟೆಲಿಪ್ರಾಂಪ್ಟರ್ ನೋಡಿ ಭಾಷಣ ಮಾಡಿದ ಮೋದಿ

Update: 2019-03-04 23:00 IST

ಪಾಟ್ನ, ಮಾ.4: ರಾಜಕೀಯ ಸಭೆ, ಸಮಾರಂಭಗಳಲ್ಲಿ ಪೂರ್ವಸಿದ್ಧತೆಯಿಲ್ಲದೆ ಗಂಟೆಗಟ್ಟಲೆ ನಿರರ್ಗಳವಾಗಿ ಭಾಷಣ ಮಾಡುವುದಕ್ಕೆ ಹೆಸರಾದ ಪ್ರಧಾನಿ ನರೇಂದ್ರ ಮೋದಿ ರವಿವಾರ ಬಿಹಾರದ ಪಾಟ್ನದಲ್ಲಿ ನಡೆದ ಸಂಕಲ್ಪ ರ‍್ಯಾಲಿಯಲ್ಲಿ ‘ಟೆಲಿಪ್ರಾಂಪ್ಟರ್’ ಸಾಧನವನ್ನು ಬಳಸಿರುವುದು ಚರ್ಚೆಯನ್ನು ಹುಟ್ಟುಹಾಕಿದೆ.

 ಭಾಷಣದ ಲಿಖಿತ ಪ್ರತಿಯನ್ನು ವೀಕ್ಷಕರಿಗೆ ಕಾಣದಂತೆ ಬಳಸಲು ‘ಟೆಲಿಪ್ರಾಂಪ್ಟರ್’ಗಳನ್ನು ಉಪಯೋಗಿಸಲಾಗುತ್ತದೆ. ಈ ಸಾಧನ ಟಿವಿ ಫ್ರೇಮ್‌ಗಳಲ್ಲಿ ಕಾಣಿಸುವುದಿಲ್ಲ. ಆದರೆ ರವಿವಾರದ ಕಾರ್ಯಕ್ರಮದ ಬಗ್ಗೆ ಟ್ವೀಟ್ ಮಾಡಿದ್ದ ಬಿಹಾರದ ಆರೋಗ್ಯ ಸಚಿವ ಮಂಗಳ್ ಪಾಂಡೆ ಬಳಸಿದ್ದ ‘ಕ್ಲೋಸ್ ಅಪ್’ ಚಿತ್ರಗಳಲ್ಲಿ ಈ ಸಾಧನವು ಮೋದಿಯ ಎಡಭಾಗದಲ್ಲಿ ಕಂಡುಬಂದಿದೆ. ಒಂದೆರಡು ಫೋಟೋಗಳಲ್ಲಿ ಮೋದಿ ಈ ಸಾಧನದತ್ತ ನೋಡುತ್ತಿರುವಂತೆಯೂ ಕಂಡುಬಂದಿದೆ.

ಈ ಬಗ್ಗೆ ತಕ್ಷಣ ತೀವ್ರವಾಗಿ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಲಾಲೂಪ್ರಸಾದ್ ಯಾದವ್, ಮೋದಿ ಬಿಹಾರದಲ್ಲಿ ಸಂಭವನೀಯ ಸೋಲಿನ ಸಾಧ್ಯತೆ ಕಂಡು ಆತ್ಮವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ. ತನ್ನ ಯೋಜನೆಗಳ ವೈಫಲ್ಯದಿಂದ ಕಂಗಾಲಾಗಿರುವ ಮನುಷ್ಯನೊಬ್ಬ ಯಾವುದೇ ಸುಳ್ಳು ಹೇಳಲೂ ಹಿಂಜರಿಯುವುದಿಲ್ಲ. ಯಾವುದೇ ಸುಳ್ಳು ಭರವಸೆ ನೀಡಲೂ ಹೇಸುವುದಿಲ್ಲ. ಬಿಹಾರದಲ್ಲಿ ಸೋಲಿನ ಮುನ್ಸೂಚನೆಯಿಂದ ಕಂಗಾಲಾಗಿರುವ ಮೋದಿ ಈಗ ಟೆಲಿಪ್ರಾಂಪ್ಟರ್‌ನ ಮೊರೆ ಹೋಗಬೇಕಾಗಿದೆ ಎಂದು ಲಾಲೂಪ್ರಸಾದ್ ಟೀಕಿಸಿದ್ದಾರೆ.

 ಬಹುಕೋಟಿ ಮೇವು ಹಗರಣದಲ್ಲಿ ಶಿಕ್ಷೆಗೊಳಗಾಗಿರುವ ಲಾಲೂಪ್ರಸಾದ್ ಯಾದವ್ ಈಗ ಜೈಲಿನಲ್ಲಿದ್ದಾರೆ. ಈ ಮಧ್ಯೆ, ಟೆಲಿಪ್ರಾಂಪ್ಟರ್ ಬಳಕೆಗೆ ಸ್ಪಷ್ಟನೆ ನೀಡಿರುವ ಬಿಜೆಪಿ ಮೂಲಗಳು, ಕೆಲವೊಮ್ಮೆ ಅಂಕಿ ಅಂಶಗಳ ಬಗ್ಗೆ ಮಾಹಿತಿ ಪಡೆಯಲು ಇದನ್ನು ಪ್ರಧಾನಿ ಭಾಷಣದ ಸಂದರ್ಭ ಬಳಸುತ್ತಾರೆ. ಹೊಸದಿಲ್ಲಿಯಲ್ಲಿ ಜನವರಿಯಲ್ಲಿ ನಡೆದ ರಾಷ್ಟ್ರೀಯ ಸಮಿತಿ ಸಭೆಯಲ್ಲೂ ಪ್ರಧಾನಿ ಟೆಲಿಪ್ರಾಂಪ್ಟರ್ ಬಳಸಿದ್ದಾರೆ ಎಂದು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News