ಸಂಧಾನದ ಮೂಲಕ ಅಯೋಧ್ಯೆ ವಿವಾದ ಬಗೆಹರಿಸಲು ಸುಪ್ರೀಂ ಸಲಹೆ

Update: 2019-03-06 16:59 GMT

ಹೊಸದಿಲ್ಲಿ, ಮಾ.6: ಅಯೋಧ್ಯೆ ವಿವಾದವನ್ನು ಸಂಧಾನದ ಮೂಲಕ ಬಗೆಹರಿಸುವುದಕ್ಕಾಗಿ ಮಧ್ಯವರ್ತಿಗಳನ್ನು ನೇಮಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ತಾನು ಶೀಘ್ರದಲ್ಲೇ ಆದೇಶವೊಂದನ್ನು ಜಾರಿಗೊಳಿಸಲು ಬಯಸಿರುವುದಾಗಿ ಸುಪ್ರೀಂಕೋರ್ಟ್ ಬುಧವಾರ ತಿಳಿಸಿದೆ.

  ಅಯೋಧ್ಯೆ ಭೂವಿವಾದ ಪ್ರಕರಣದ ಆಲಿಕೆಯನ್ನು ಇಂದು ಕೈಗೆತ್ತಿಕೊಂಡ ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ನ್ಯಾಯಪೀಠವು, ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ನೇಮಕಗೊಳ್ಳಲಿರುವ ಸಂಭಾವ್ಯ ಮಧ್ಯಸ್ಥಿಕೆದಾರರ ಹೆಸರುಗಳನ್ನು ನೀಡುವಂತೆ ಸಂಬಂಧಪಟ್ಟ ಕಕ್ಷಿದಾರರಿಗೆ ಅದು ಸೂಚಿಸಿತು.

  ಆದಾಗ್ಯೂ ಅಯೋಧ್ಯೆ ವಿವಾದವನ್ನು ಮಧ್ಯಸ್ಥಿಕೆಯ ಸಂಧಾನಕ್ಕೆ ಒಪ್ಪಿಸಬೇಕೇ ಅಥವಾ ಬೇಡವೇ ಎಂಬ ಕುರಿತ ತನ್ನ ತೀರ್ಪನ್ನು ನ್ಯಾಯಮೂರ್ತಿಗಳಾದ ಎಸ್.ಎಂ. ಬೊಬಾಡೆ, ಡಿ.ವೈ.ಚಂದ್ರಚೂಡ್, ಅಶೋಕ್ ಭೂಷಣ್ ಹಾಗೂ ಎಸ್.ಎ.ನಝೀರ್ ಅವರನ್ನು ಕೂಡಾ ಒಳಗೊಂಡ ನ್ಯಾಯಪೀಠವು ಕಾದಿರಿಸಿತು.

  ಅಯೋಧ್ಯೆ ವಿವಾದವನ್ನು ಸಂಧಾನದ ಮೂಲಕ ಇತ್ಯರ್ಥ ಪಡಿಸುವುದಕ್ಕಾಗಿ ಮಧ್ಯವರ್ತಿಗಳನ್ನು ನಿಯೋಜಿಸುವ ಬಗ್ಗೆ ಒಲವು ಹೊಂದಿರುವುದಾಗಿ ಸುಪ್ರೀಂಕೋರ್ಟ್ ಫೆಬ್ರವರಿ 26ರಂದು ತಿಳಿಸಿತ್ತು. ಈ ಬಗ್ಗೆ ಮಾರ್ಚ್ 6ರಂದು ತನ್ನ ಅಭಿಪ್ರಾಯವನ್ನು ತಿಳಿಸುವುದಾಗಿ ಅದು ಹೇಳಿತ್ತು.

 ನಿರ್ಮೋಹಿ ಅಖಾಡ ಹೊರತು ಪಡಿಸಿ ಎಲ್ಲಾ ಹಿಂದೂ ಸಂಘಟನೆಗಳು ಅಯೋಧ್ಯೆ ವಿವಾದವನ್ನು ಮಧ್ಯಸ್ಥಿಕೆಯ ಸಂಧಾನಕ್ಕಾಗಿ ಒಪ್ಪಿಸುವುದನ್ನು ವಿರೋಧಿಸಿದ್ದರೆ, ಮುಸ್ಲಿ ಂ ಸಂಘಟನೆಗಳು ಅದಕ್ಕೆ ಬೆಂಬಲ ಸೂಚಿಸಿದ್ದವು.

ಉತ್ತರಪ್ರದೇಶದ ಸರಕಾರದ ಪರವಾಗಿ ವಾದಮಂಡಿಸಿದ ಸಾಲಿಸಿಟರ್ ತುಷಾರ್ ಮೆಹ್ತಾ ಅವರು, ಅಯೋಧ್ಯೆ ವಿವಾದವು ಸಂಧಾನದ ಮೂಲಕ ಇತ್ಯರ್ಥಗೊಳ್ಳಬಹುದಾದ ಅವಕಾಶಗಳು ಲಭ್ಯವಿದ್ದರೆ ಮಾತ್ರವೇ, ನ್ಯಾಯಾಲಯವು ಪ್ರಕರಣವನ್ನು ಮಧ್ಯಸ್ಥಿಕೆಗೆ ಒಪ್ಪಿಸಬೇಕೆಂದು ಸೂಚಿಸಿತ್ತು.

 ಆದರೆ ಪ್ರಕರಣದ ಸ್ವರೂಪವನ್ನು ಗಮನಿಸಿದರೆ, ಸಂಧಾನದ ದಾರಿಯು ಸೂಕ್ತವಲ್ಲವೆಂದು ಅವರು ಅಭಿಪ್ರಾಯಿಸಿದರು.

 ಶ್ರೀರಾಮಚಂದ್ರನು ಅಯೋಧ್ಯೆಯಲ್ಲಿ ಜನಿಸಿದ್ದನೆಂಬುದರಲ್ಲಿ ಯಾವುದೇ ವಿವಾದವಿಲ್ಲ. ಆದರೆ ರಾಮಜನ್ಮಸ್ಥಳದ ಬಗ್ಗೆ ಮಾತ್ರವೇ ವಿವಾದವಿದೆಯೆಂದವರು ಅಭಿಪ್ರಾಯಿಸಿದರು. ಮಧ್ಯಸ್ಥಿಕೆದಾರರ ಮೂಲಕ ಅಯೋಧ್ಯೆ ವಿವಾದವನ್ನು ಬಗೆಹರಿಸುವುದನ್ನು ಬೆಂಬಲಿಸಿದ ಮುಸ್ಲಿಂ ಸಂಘಟನೆಗಳು, ಇಡೀ ಮಧ್ಯಸ್ಥಿಕೆ ಕಲಾಪಗಳನ್ನು ಕ್ಯಾಮರಾ ಮೂಲಕ ಚಿತ್ರೀಕರಿಸಬೇಕು ಹಾಗೂ ಅಂತಿಮ ವರದಿ ದೊರೆಯುವವರೆಗೆ ಕಲಾಪದ ವಿವರಗಳನ್ನು ಬಹಿರಂಗಪಡಿಸಬಾರದು ಎಂದು ಆಗ್ರಹಿಸಿದವು.

ವಿವಾದಿತ ಅಯೋಧ್ಯೆಯ ಭೂಮಿಯು ಸರಕಾರಕ್ಕೆ ಸೇರಿದ್ದು ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ತಿಳಿಸಿದರು.

   1994ರಲ್ಲಿ ಆಗಿನ ಪ್ರಧಾನಿ ನರಸಿಂಹರಾವ್ ಅವರು, ವಿವಾದ ಜಾಗದಲ್ಲಿ ದೇವಾಲಯವಿದ್ದ ಕುರುಹುಗಳು ಕಂಡುಬಂದಲ್ಲಿ ಅದನ್ನು ದೇಗುಲ ನಿರ್ಮಾಣಕ್ಕೆ ಬಿಟ್ಟುಕೊಡುವುದಾಗಿ ಹೇಳಿದ್ದರು’’ ಎಂದು ತಿಳಿಸಿದರು.

 ಮನಸ್ಸು, ಹೃದಯದ ಉಪಶಮನವಾಗಬೇಕಿದೆ

   ಅಯೋಧ್ಯೆ ವಿವಾದದ ಗಂಭೀರ ಸ್ವರೂಪದ ಬಗ್ಗೆ ತನಗೆ ಚೆನ್ನಾಗಿ ಅರಿವಿರುವುದಾಗಿ ಸುಪ್ರೀಂಕೋರ್ಟ್ ನ್ಯಾಯಪೀಠ ವಿಚಾರಣೆಯ ವೇಳೆ ತಿಳಿಸಿತು. ಈ ಪ್ರಕರಣವು ಕೇವಲ ಆಸ್ತಿಯ ಪ್ರಕರಣ ಮಾತ್ರವಲ್ಲ, ನಂಬಿಕೆ ಹಾಗೂ ಭಾವನೆಯ ಪ್ರಕರಣವೂ ಆಗಿದೆಯೆಂದು ಅದು ಅಭಿಪ್ರಾಯಿಸಿತು.

‘‘ಇದು ಕೇವಲ ಆಸ್ತಿಯ ವಿಷಯವಲ್ಲ. ಇದು ಮನಸ್ಸು, ಹೃದಯದ ಉಪಶಮನದ ವಿಷಯವೂ ಹೌದು ’’ ಎಂದು ಅದು ಹೇಳಿತು.

 ‘‘ಮೊಗಲ್ ದೊರೆ ಬಾಬರ್ ಏನು ಮಾಡಿದ್ದ ಹಾಗೂ ಆನಂತರ ಏನಾಯಿತೆಂಬ ಬಗ್ಗೆ ನಾವು ಆಸಕ್ತಿ ಹೊಂದಿಲ್ಲ. ಪ್ರಸಕ್ತ ಸಂದರ್ಭದಲ್ಲಿ ಅಲ್ಲಿ ಏನು ಅಸ್ತಿತ್ವದಲ್ಲಿದೆಯೆಂಬ ಬಗ್ಗೆ ನಾವು ಪರಿಶೀಲನೆ ನಡೆಸುತ್ತಿದ್ದೇವೆ’’ ಎಂದು ರಂಜನ್ ಗೊಗೊಯಿ ನೇತೃತ್ವದ ನ್ಯಾಯಪೀಠ ತಿಳಿಸಿತು.

  ದಶಕಗಳಷ್ಟು ಹಳೆಯದಾದ ಅಯೋಧ್ಯೆ ವಿವಾದವನ್ನು ಸೌಹಾರ್ದಯುತವಾಗಿ ಸಂಧಾನದ ಮೂಲಕ ಇತ್ಯರ್ಥಪಡಿಸುವ ಸಾಧ್ಯತೆಯ ಬಗ್ಗೆ ಪರಿಶೀಲಿಸುವಂತೆ ಅದು ಸಂಬಂಧಪಟ್ಟ ಕಕ್ಷಿದಾರರಿಗೆ ಸೂಚಿಸಿತ್ತು. ಇದರಿಂದಾಗಿ ಘಾಸಿಗೊಡ ಬಾಂಧವ್ಯಗಳ ಉಪಶಮನ ನೀಡಲು ಸಾಧ್ಯವೆಂದು ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News