ಜಮ್ಮು ಗಡಿ ನಿಯಂತ್ರಣ ರೇಖೆಯಲ್ಲಿ ಮತ್ತೆ ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನ
ಜಮ್ಮು, ಮಾ. 6: ಪಾಕಿಸ್ತಾನ ಸೇನೆ ಬುಧವಾರ ಜಮ್ಮು ಹಾಗೂ ಕಾಶ್ಮೀರದ ರಾಜೋರಿ ಹಾಗೂ ಪೂಂಛ್ ಜಿಲ್ಲೆಗಳ ಗಡಿ ನಿಯಂತ್ರಣ ರೇಖೆಯ 12ಕ್ಕೂ ಅಧಿಕ ಮುಂಚೂಣಿ ಠಾಣೆಗಳನ್ನು ಗುರಿಯಾಗಿರಿಸಿ ಫಿರಂಗಿ ಗನ್‌ಗಳನ್ನು ಬಳಸಿ ದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜೋರಿ ಜಿಲ್ಲೆಯ ಸುಂದರ್‌ಬನಿ ವಲಯದ ಗಡಿ ನಿಯಂತ್ರಣ ರೇಖೆಯಲ್ಲಿ ರಾತ್ರಿ ಪೂರ್ತಿ ನಿರಂತರವಾಗಿ ಪಾಕಿಸ್ತಾನ ಸೇನೆ ತೀವ್ರ ಶೆಲ್ ಹಾಗೂ ಗುಂಡಿನ ದಾಳಿ ನಡೆಸಿತು. ಪೂಂಛ್ ವಲಯದ ಕೃಷ್ಣಘಾಟಿ ವಲಯದಲ್ಲಿ ಬುಧವಾರ ಮುಂಜಾನೆ ಶೆಲ್ ಹಾಗೂ ಗುಂಡಿನ ದಾಳಿ ಆರಂಭಿಸಿತು ಎಂದು ಅವರು ತಿಳಿಸಿದ್ದಾರೆ. ಇದಕ್ಕೆ ಭಾರತೀಯ ಸೇನೆ ಕಠಿಣವಾಗಿ ಹಾಗೂ ಪರಿಣಾಮಕಾರಿಯಾಗಿ ಪ್ರತಿದಾಳಿ ನಡೆಸಿತು. ಉಭಯ ದೇಶಗಳ ನಡುವಿನ ಗುಂಡಿನ ದಾಳಿಯಿಂದ ಗಡಿಯಲ್ಲಿರುವ ನಿವಾಸಿಗಳು ಆತಂಕಗೊಂಡರು ಎಂದು ಅವರು ಹೇಳಿದ್ದಾರೆ.
ಆದಾಗ್ಯೂ, ಭಾರತದ ಭಾಗದಲ್ಲಿ ಸಾವು ನೋವುಗಳು ಸಂಭವಿಸಿದ ಬಗ್ಗೆ ಯಾವುದೇ ವರದಿ ಬಂದಿಲ್ಲ. ಪಾಕಿಸ್ತಾನ ಮಂಗಳವಾರ ಕೂಡ ರಾಜೋರಿಯ ನೌಶೇರಾ ಹಾಗೂ ಸುಂದರ್‌ಬನಿ, ಪೂಂಛ್‌ನ ಕೃಷ್ಣಘಾಟಿಯಲ್ಲಿ ಕೂಡ ಶೆಲ್ ಹಾಗೂ ಗುಂಡಿನ ದಾಳಿ ನಡೆಸಿತ್ತು. ನೌಶೇರಾ ವಲಯದಲ್ಲಿ 3 ಗಂಟೆಗಳ ಕಾಲ ಗುಂಡಿನ ಚಕಮಕಿ ನಡೆಯಿತು. ಇದರಿಂದ ಓರ್ವ ಯೋಧ ಗಾಯಗೊಂಡರು.