×
Ad

ಸರಕಾರ ಉದ್ಯೋಗ ಸೃಷ್ಟಿಯಲ್ಲಿ ವಿಫಲವಾಗಿದೆ ಎಂದ ಯುವಕನಿಗೆ ಬಿಜೆಪಿ ಕಾರ್ಯಕರ್ತರಿಂದ ಥಳಿತ

Update: 2019-03-07 20:06 IST

ನೊಯ್ಡಾ, ಮಾ.7: ಮಾಧ್ಯಮವೊಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸರಕಾರದ ಕಾರ್ಯನಿರ್ವಹಣೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರವಾಗಿ ಸರಕಾರವನ್ನು ಟೀಕಿಸಿದ ಮುಝಫ್ಫರನಗರದ ಯುವಕನೊಬ್ಬನಿಗೆ ಬಿಜೆಪಿ ಕಾರ್ಯಕರ್ತರೆನ್ನಲಾದ ಕೆಲವರು ಹಲ್ಲೆ ನಡೆಸಿದ ಘಟನೆಯ ನಡೆದಿದೆ.

ಭಾರತ್ ಸಮಾಚಾರ್ ಪತ್ರಕರ್ತರೊಬ್ಬರು `ಮಹೌಲ್ ಬನಾಯೆ ರಖಿಯೆ' ಎಂಬ ಕಾರ್ಯಕ್ರಮದ ಅಂಗವಾಗಿ ಸರಕಾರದ ಕಾರ್ಯನಿರ್ವಹಣೆಯ ಬಗ್ಗೆ  ಜನರ ಒಂದು ಗುಂಪನ್ನು ಪ್ರಶ್ನಿಸಿದಾಗ ಆ ಗುಂಪಿನಲ್ಲಿದ್ದ ಅದ್ನಾನ್ ಎಂಬ ಯುವಕ ಸರಕಾರವನ್ನು ಟೀಕಿಸಿದ್ದು ಬಿಜೆಪಿ ಕಾರ್ಯಕರ್ತರು ಥಳಿಸಿದ್ದಾರೆನ್ನಲಾಗಿದೆ.

ಈ ಟಿವಿ ಶೋ ನಿರೂಪಕರಾಗಿರುವ ನರೇಂದ್ರ ಪ್ರತಾಪ್ ಮಾತನಾಡಿ, “ಪಾರ್ಕ್ ನಲ್ಲಿ ಹಲವಾರು ಯುವಕರಿದ್ದುದರಿಂದ ಅವರ ಅಭಿಪ್ರಾಯ ಸಂಗ್ರಹಿಸಲು ರೈತರ ಸಮಸ್ಯೆಯಿಂದ ಹಿಡಿದು ಕಾನೂನು ಸುವ್ಯವಸ್ಥೆ ಬಗ್ಗೆ ಹಲವು ಪ್ರಶ್ನೆಗಳನ್ನು ಕೇಳಲಾಗಿತ್ತು. ಆಗ ಕೆಲವರ ಉತ್ತರ ಸರಕಾರದ ಪರ ಆಗಿಲ್ಲವೆಂದು ಕಂಡ ಕೂಡಲೇ ಕೆಲವರು ಪ್ರಧಾನಿ ಪರ ಘೋಷಣೆ ಹಾಗೂ ಭಾರತ್ ಮಾತಾ ಕಿ ಜೈ ಘೋಷಣೆ ಕೂಗಲಾರಂಭಿಸಿದ್ದರು. ಕೆಲ ಆರ್‍ಎಲ್‍ಡಿ ಕಾರ್ಯಕರ್ತರೂ ಇದ್ದು ಅವರೂ ಹಲ್ಲೆ ಸಂದರ್ಭ ಜತೆ ಸೇರಿದ್ದರು,'' ಎಂದಿದ್ದಾರೆ.

``ಈಗಿನ ಸರಕಾರ ಯುವಕರಿಗೆ ಉದ್ಯೋಗ ಕೊಡಿಸಲು ವಿಫಲವಾಗಿದೆ'' ಎಂದು ಅದ್ನಾನ್ ಹೇಳುತ್ತಿದ್ದಂತೆಯೇ ಆತನಿಗೆ ಅಡ್ಡಿ ಪಡಿಸಿ ಥಳಿಸಲಾಯಿತು. ಸಂತ್ರಸ್ತ ಭಯದಿಂದ ಪೊಲೀಸ್ ದೂರು ದಾಖಲಿಸಿಲ್ಲವೆಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News