ವಿ.ವಿ. ಅಧ್ಯಾಪಕರ ನೇಮಕಾತಿ ಮೀಸಲಾತಿಯಲ್ಲಿ ರೋಸ್ಟರ್ ಆಧ್ಯಾದೇಶಕ್ಕೆ ಕೇಂದ್ರ ಸಂಪುಟ ಅನುಮೋದನೆ
ಹೊಸದಿಲ್ಲಿ, ಮಾ. 6: ವಿಶ್ವವಿದ್ಯಾನಿಲಯಗಳಲ್ಲಿ ಸಿಬ್ಬಂದಿ ನೇಮಕಾತಿಗೆ ಮೀಸಲಾತಿ ಕುರಿತ ಆಧ್ಯಾದೇಶಕ್ಕೆ ಕೇಂದ್ರ ಸಂಪುಟ ಗುರುವಾರ ಅನುಮೋದನೆ ನೀಡಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.
ವಿವಿಧ ವಿದ್ಯಾರ್ಥಿಗಳ ಹಾಗೂ ಅಧ್ಯಾಪಕರ ಸಂಘ ಈ ವಿಷಯದ ಕುರಿತು ಸರಣಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ರೋಸ್ಟರ್ ಮೀಸಲಾತಿ ಮರು ಸ್ಥಾಪಿಸಲು ಕೇಂದ್ರ ಸರಕಾರ ಬದ್ಧವಾಗಿದೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವ್ಡೇಕರ್ ಈ ವಾರದ ಆರಂಭದಲ್ಲಿ ಹೇಳಿದ್ದರು. ಅಧ್ಯಾಪಕ ಹುದ್ದೆಯ ಮೀಸಲಾತಿಗೆ ಕಾಲೇಜು ಅಥವಾ ವಿಶ್ವವಿದ್ಯಾನಿಲಯವನ್ನು ಒಂದು ಘಟಕವಾಗಿ ತೆಗೆದುಕೊಂಡು 200 ಅಂಶಗಳ ರೋಸ್ಟರ್ ಅನ್ನು ಮರುಸ್ಥಾಪಿಸಲು ಆಧ್ಯಾದೇಶ ತರುವಂತೆ ಈ ಹಿಂದೆ ಸರಕಾರವನ್ನು ಅವರು ಆಗ್ರಹಿಸಿದ್ದರು. 2017 ಎಪ್ರಿಲ್‌ನಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿದ ತೀರ್ಪಿಗೆ ಅನುಗುಣವಾಗಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಮೀಸಲು ಇರುವ ಬೋಧಕ ಹುದ್ದೆಗಳ ಸಂಖ್ಯೆಯನ್ನು ಲೆಕ್ಕ ಹಾಕಲು ಪ್ರತಿಯೊಂದು ಇಲಾಖೆಯನ್ನು ಪ್ರತ್ಯೇಕ ಘಟಕವಾಗಿ ಪರಿಗಣಿಸಬೇಕು ಎಂದು ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗ ಘೋಷಿಸಿತ್ತು.
ಅಲಹಾಬಾದ್ ಹೈಕೋರ್ಟ್‌ನ ತೀರ್ಪು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದ ಬಳಿಕ, ಮಾನವ ಸಂಪನ್ಮೂಲಕ ಅಭಿವೃದ್ಧಿ ಸಚಿವಾಲಯ ಮರು ಪರಿಶೀಲನಾ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು ಕೂಡ ಸುಪ್ರೀಂ ಕೋರ್ಟ್ ಕಳೆದ ತಿಂಗಳು ತಿರಸ್ಕರಿಸಿತ್ತು.