×
Ad

ಲೋಕಪಾಲ್ ಆಯ್ಕೆ ಸಭೆಯ ದಿನಾಂಕದ ಬಗ್ಗೆ 10 ದಿನಗಳ ಒಳಗೆ ತಿಳಿಸಿ: ಸುಪ್ರೀಂ ಕೋರ್ಟ್

Update: 2019-03-07 21:17 IST

ಹೊಸದಿಲ್ಲಿ, ಮಾ. 6: ಲೋಕಪಾಲ್ ನಿಯೋಜನೆಗೆ ಸೂಚಿಸಿದ ಹೆಸರನ್ನು ಬಹಿರಂಗಗೊಳಿಸುವಂತೆ ಆಗ್ರಹಿಸಿ ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಸಲ್ಲಿಸಿದ ಮನವಿಯನ್ನು ಗುರುವಾರ ತಿರಸ್ಕರಿಸಿರುವ ಸುಪ್ರೀಂ ಕೋರ್ಟ್, ಲೋಕಪಾಲ್ ನಿಯೋಜನೆ ಬಗ್ಗೆ ಆಯ್ಕೆ ಸಮಿತಿ ನಡೆಸುವ ಸಭೆಯ ದಿನಾಂಕದ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡಲು ಕೇಂದ್ರಕ್ಕೆ 10 ದಿನಗಳ ಕಾಲಾವಕಾಶ ನೀಡಿದೆ.

ಶೋಧ ಘಟಕ ಈಗಾಗಲೇ ಶಿಫಾರಸನ್ನು ಕಳುಹಿಸಿಕೊಟ್ಟಿದೆ ಎಂದು ಕೇಂದ್ರ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿತು. ಅತ್ಯುಚ್ಛ ನ್ಯಾಯಾಲಯದ ಆದೇಶದಂತೆ ಫೆಬ್ರವರಿ 28ರಂದು 3 ಪೀಠಗಳ ತಲಾ ಮೂವರು ಸದಸ್ಯರ ಹೆಸರನ್ನು ಸರಕಾರಕ್ಕೆ ಕಳುಹಿಸಿಕೊಡಲಾಗಿದೆ ಎಂದು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ತಿಳಿಸಿದ್ದಾರೆ. ದೂರುದಾರ ಪ್ರಶಾಂತ್ ಭೂಷಣ್ ಅವರು ಈ ಹೆಸರನ್ನು ಬಹಿರಂಗಗೊಳಿಸುವಂತೆ ಆಗ್ರಹಿಸಿದರು. ಆದರೆ, ಸುಪ್ರೀಂ ಕೋರ್ಟ್ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿತು.

‘‘ನೀವು ಉತ್ತಮ ಕೆಲಸ ಮಾಡಿದ್ದೀರಿ. ಆದರೆ, ಎಲ್ಲೊ ಒಂದು ಕಡೆ ಮಿತಿಗಳಿವೆ. ಹೆಸರುಗಳನ್ನು ಬಹಿರಂಗಗೊಳಿಸುವ ಅಗತ್ಯತೆ ಇದೆ ಎಂದು ನಮಗೆ ಕಾಣುತ್ತಿಲ್ಲ’’ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ನೇತೃತ್ವದ ಪೀಠ ಹೇಳಿದೆ. ಯಾರೊಬ್ಬರನ್ನೂ ನಿಯೋಜಿಸದೇ ಇರುವುದರಿಂದ ಆಯ್ಕೆ ಸಮಿತಿಯಲ್ಲಿ ಪ್ರತಿಪಕ್ಷದ ನಾಯಕರು ಯಾರು ಎಂಬ ಬಗ್ಗೆ ವೇಣುಗೋಪಾಲ್ ಅವರನ್ನು ಗೊಗೋಯಿ ಪ್ರಶ್ನಿಸಿದರು. ಸಿಬಿಐ ನಿರ್ದೇಶಕರ ಆಯ್ಕೆ ಪ್ರಕರಣದಲ್ಲಿ ಶಿಷ್ಟಾಚಾರವಾಗಿ ಸಭೆಯಲ್ಲಿ ಏಕೈಕ ಅತಿ ದೊಡ್ಡ ಪಕ್ಷದ ನಾಯಕ ಪಾಲ್ಗೊಂಡಿದ್ದರು ಎಂದು ವೇಣುಗೋಪಾಲ್ ನ್ಯಾಯಾಲಯಕ್ಕೆ ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News