ಪತಿಯ ಅಂತ್ಯಸಂಸ್ಕಾರದ ಸಾಲ ತೀರಿಸಲು ಪುತ್ರನನ್ನೇ ಮಾರಿದ ಮಹಿಳೆ !

Update: 2019-03-07 15:53 GMT

ತಂಜಾವೂರ್ (ತಮಿಳುನಾಡು), ಮಾ. 7: ಸರಕಾರೇತರ ಸಂಸ್ಥೆಯೊಂದು ನೀಡಿದ ಮಾಹಿತಿ ಹಿನ್ನೆಲೆಯಲ್ಲಿ ತಮಿಳುನಾಡಿನ ತಂಜಾವೂರು ಜಿಲ್ಲೆಯಿಂದ 10 ವರ್ಷದ ಜೀತದಾಳು ಬಾಲಕನನ್ನು ರಕ್ಷಿಸಲಾಗಿದೆ. ಜನವರಿಯಲ್ಲಿ ಅಪ್ಪಳಿಸಿದ ಗಾಝಾ ಚಂಡಮಾರುತದ ಸಂದರ್ಭ ಮೃತಪಟ್ಟ ಪತಿಯ ಅಂತ್ಯ ಸಂಸ್ಕಾರಕ್ಕೆ ಭೂಮಾಲಿಕನಿಂದ ಪಡೆದುಕೊಂಡ 35 ಸಾವಿರ ರೂಪಾಯಿ ಸಾಲ ಹಿಂದಿರುಗಿಸಲು ಸಾಧ್ಯವಾಗದೆ ಮಹಿಳೆಯೋರ್ವಳು ತನ್ನ ಪುತ್ರನನ್ನು ವಿನಿಮಯ ಮಾಡಿಕೊಂಡಿದ್ದಾರೆ.

ಬಾಲಕನನ್ನು ತಂಜಾವೂರಿನ ಮಕ್ಕಳ ಆಶ್ರಯ ಧಾಮದಲ್ಲಿ ಇರಿಸಲಾಗಿದೆ. ರಾಜ್ಯ ಸರಕಾರದ 2 ಲಕ್ಷ ರೂಪಾಯಿಯ ಪುನರ್ವಸತಿ ಪ್ಯಾಕೇಜ್‌ಗೆ ಕೂಡ ಬಾಲಕ ಅರ್ಹನಾಗಿದ್ದಾನೆ. ತಮಿಳುನಾಡಿನ ಕರಾವಳಿಗೆ ಚಂಡ ಮಾರುತ ಅಪ್ಪಳಿಸಿದ ಬಳಿಕ ಬೆಳಕಿಗೆ ಬರುತ್ತಿರುವ ಎರಡನೇ ಪ್ರಕರಣ ಇದಾಗಿದೆ. ಪುದುಕೋಟೈಯಲ್ಲಿ ಕುಟುಂಬದ ಮನೆ ಕುಸಿದು ಪತಿ ಮೃತರಾದ ಬಳಿಕ ಬಾಲಕನ ತಾಯಿ ಭೂಮಾಲಿಕನಿಂದ ಸಾಲ ಪಡೆದಿದ್ದರು. ಆದರೆ, ಸಾಲ ಹಿಂದಿರುಗಿಸಲು ಅವರಿಗೆ ಸಾಧ್ಯವಾಗಿರಲಿಲ್ಲ. ಆದುದರಿಂದ ಸಾಲದ ಬದಲಿಗೆ ತನ್ನ ಓರ್ವ ಪುತ್ರನನ್ನು ಜೀತದಾಳುವಾಗಿ ನೀಡಿದ್ದಾಳೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News