ಭ್ರಷ್ಟಾಚಾರ ಆರೋಪದಿಂದ ಪಾರಾಗಲು ಭೀತಿ ಹುಟ್ಟಿಸುತ್ತಿರುವ ಮೋದಿ: ಚಂದ್ರಬಾಬು ನಾಯ್ಡು

Update: 2019-03-07 15:58 GMT

ಅಮರಾವತಿ, ಮಾ. 7: ‘ಅಸಾಂವಿಧಾನಿಕ ರೀತಿ’ಯಲ್ಲಿ ಮಾಧ್ಯಮವನ್ನು ಮೌನವಾಗಿರಿಸಲು ಮೋದಿ ಸರಕಾರ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿರುವ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರ ಬಾಬು ನಾಯ್ಡು, ರಫೇಲ್ ಪ್ರಕರಣದ ಕುರಿತು ‘ದಿ ಹಿಂದೂ’ ದಿನಪತ್ರಿಕೆ ವಿರುದ್ಧ ಸರಕಾರಿ ರಹಸ್ಯ ಕಾಯ್ಡೆ (ಒಎಸ್‌ಎ) ಅಡಿಯಲ್ಲಿ ಪ್ರಕರಣ ದಾಖಲಿಸುವುದಾಗಿ ಕೇಂದ್ರ ಒಡ್ಡಿರುವ ಬೆದರಿಕೆಯನ್ನು ಖಂಡಿಸಿದೆ.

ರಫೇಲ್ ಒಪ್ಪಂದಕ್ಕೆ ಸಂಬಂಧಿಸಿ ದಾಖಲೆಗಳು ರಕ್ಷಣಾ ಸಚಿವಾಲಯದಿಂದ ಕಳವಾಗಿದೆ ಎಂದು ಕೇಂದ್ರ ಸರಕಾರ ಬುಧವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು ಹಾಗೂ ವಿಶೇಷ ವರದಿ ಪ್ರಕಟಿಸಿದ ಪತ್ರಿಕೆ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಬೆದರಿಕೆ ಒಡ್ಡಿತ್ತು. ‘ದಿ ಹಿಂದೂ’ ಹಾಗೂ ಎನ್. ರಾಮ್ ಬೆಳಕಿಗೆ ತಂದ ರಫೇಲ್ ಒಪ್ಪಂದದಲ್ಲಿನ ಭ್ರಷ್ಟಾಚಾರದ ಆರೋಪದಿಂದ ಮುಕ್ತರಾಗಿ ಹೊರಬರುವ ಬದಲು ಮೋದಿ ಸರಕಾರ ಭೀತಿ ಹುಟ್ಟಿಸುವ ಮೂಲಕ ಮಾಧ್ಯಮವನ್ನು ಅಸಾಂವಿಧಾನಿಕವಾಗಿ ಮೌನವಾಗಿರಿಸಲು ಪ್ರಯತ್ನಿಸುತ್ತಿದೆ. ಇದು ಪ್ರಜಾಪ್ರಭುತ್ವದ ಸ್ಥಗಿತ ಸನ್ನಿಹಿತವಾಗಿರುವ ಸಾಧ್ಯತೆಯ ಚಿಹ್ನೆ ಎಂದು ಚಂದ್ರ ಬಾಬು ನಾಯ್ಡು ಟ್ವೀಟ್ ಮಾಡಿದ್ದಾರೆ.

ಸುಪ್ರೀಂ ಕೋರ್ಟ್‌ಗೆ ತಪ್ಪು ಮಾರ್ಗದರ್ಶನ ನೀಡಿದ ಬಳಿಕ, ದೇಶವನ್ನು ದಾರಿ ತಪ್ಪಿಸಿದ ಬಳಿಕ, ದೇಶದ ಎಲ್ಲ ಪ್ರಮುಖ ಸಂಸ್ಥೆಗಳನ್ನು ನಾಶಗೊಳಿಸಿದ ಬಳಿಕ ಮೋದಿ ಸರಕಾರ ‘ದಿ ಹಿಂದೂ’ ಹಾಗೂ ಎನ್. ರಾಮ್ ವಿರುದ್ಧ ಸರಕಾರಿ ರಹಸ್ಯ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಒಡ್ಡುತ್ತಿರುವುದು ಭಾರತದ ಸಂವಿಧಾನ ನೀಡಿದ ವಾಕ್ ಹಾಗೂ ಅಭಿವ್ಯಕ್ತಿ ಸ್ವಾತಂತ್ರಕ್ಕೆ ಒಡ್ಡಿದ ಗಂಭೀರ ಬೆದರಿಕೆ ಎಂದು ಚಂದ್ರ ಬಾಬು ನಾಯ್ಡು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News