ಜನೌಷಧಿ ಯೋಜನೆಯಿಂದ ಸಾಮಾನ್ಯ ಜನರ 1,000 ಕೋಟಿ ರೂ. ಉಳಿತಾಯ: ಪ್ರಧಾನಿ ಮೋದಿ

Update: 2019-03-07 16:44 GMT

ಹೊಸದಿಲ್ಲಿ,ಮಾ.7: ಜನರಿಗೆ ಕೈಗೆಟಕುವ ದರದಲ್ಲಿ ಗುಣಮಟ್ಟದ ಔಷಧಿಗಳನ್ನು ಒದಗಿಸುವ ಸರಕಾರದ ಜನೌಷಧಿ ಯೋಜನೆಯಿಂದ ಸಾಮಾನ್ಯ ಜನರಿಗೆ 1,000 ಕೋಟಿ ರೂ. ಉಳಿತಾಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ತಿಳಿಸಿದ್ದಾರೆ.

ಜನರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಔಷಧಿಗಳನ್ನು ಒದಗಿಸುವ ಇರಾದೆಯಿಂದ ಸರಕಾರ ಎರಡು ಪ್ರಮುಖ ಕ್ರಮಗಳನ್ನು ತೆಗೆದುಕೊಂಡಿದೆ. 850 ಅಗತ್ಯ ಔಷಧಿಗಳ ದರ ನಿಯಂತ್ರಣ ಮತ್ತು ಹೃದಯ ಸ್ಟೆಂಟ್ ಮತ್ತು ಮೊಣಕಾಲು ಶಸ್ತ್ರಚಿಕಿತ್ಸೆಯ ಸಾಧನಗಳ ಬೆಲೆಯಲ್ಲಿ ಇಳಿಕೆ ಎಂದು ಪ್ರಧಾನಿ ತಿಳಿಸಿದ್ದಾರೆ. ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆ (ಪಿಎಂಬಿಜೆಪಿ)ಯ ಫಲಾನುಭವಿಗಳು ಮತ್ತು ಅಂಗಡಿ ಮಾಲಕರನ್ನುದ್ದೇಶಿಸಿ ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ಮಾತನಾಡುವ ವೇಳೆ ಮೋದಿ ಈ ವಿಷಯವನ್ನು ತಿಳಿಸಿದ್ದಾರೆ.

ಜನೌಷಧಿಯ ಮೂಲಕ ಲಕ್ಷಾಂತರ ಕುಟುಂಬಗಳು 1,000 ಕೋಟಿ ರೂ. ಉಳಿತಾಯ ಮಾಡಿವೆ. ಇದು ಜನೌಷಧಿ ಬಗ್ಗೆ ಪ್ರಚಾರ ಮಾಡದೆ ಇರುವಾಗ ನಡೆದಿದೆ. ಇದು ಕೇವಲ ಆರಂಭವಷ್ಟೇ ಎಂದು ಪ್ರಧಾನಿ ಅಭಿಪ್ರಾಯಿಸಿದ್ದಾರೆ. ಕಳೆದ ನಾಲ್ಕೂವರೆ ವರ್ಷಗಳಲ್ಲಿ 5,000ಕ್ಕೂ ಅಧಿಕ ಜನೌಷಧಿ ಕೇಂದ್ರಗಳನ್ನು ತೆರಯಲಾಗಿದೆ. ಇವುಗಳ ಮೂಲಕ ಗುಣಮಟ್ಟದ ಔಷಧಿ ಪೂರೈಸುತ್ತಿರುವುದು ಮಾತ್ರವಲ್ಲದೆ ಸ್ವದ್ಯೋಗ ಅವಕಾಶವೂ ಲಭಿಸಿದೆ ಮತ್ತು ಹೊಸ ಉದ್ಯೋಗ ಅವಕಾಶಗಳು ತೆರೆದುಕೊಂಡಿವೆ. ಜನೌಷಧಿ ಮಳಿಗೆಗಳಲ್ಲಿ ಮಾರುಕಟ್ಟೆಗಿಂತ ಶೇ. 50-90 ಕಡಿಮೆ ದರದಲ್ಲಿ ಔಷಧಿಗಳು ಲಭ್ಯವಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ಜೆನೆರಿಕ್ ಔಷಧಿಗಳ ಬಗ್ಗೆ ಜಾಗೃತಿ ಮತ್ತು ಜನೌಷಧಿಗಳ ಬಳಕೆಯನ್ನು ಪ್ರೋತ್ಸಾಹಿಸಲು ಡಿಸೆಂಬರ್ 7ನ್ನು ಜನೌಷಧಿ ದಿನ ಎಂದು ಆಚರಿಸಲಾಗುವುದು ಎಂದು ಇದೇ ವೇಳೆ ಪ್ರಧಾನಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News