ತಿರುಚಿದ ನಿರ್ಣಯ ಸಲ್ಲಿಸಲಾಗಿದೆ ಎಂಬ ಟ್ವೀಟ್ ದುರುದ್ದೇಶರಹಿತ ತಪ್ಪು: ಪ್ರಶಾಂತ್ ಭೂಷಣ್

Update: 2019-03-07 16:54 GMT

ಹೊಸದಿಲ್ಲಿ, ಮಾ.7: ಎಂ.ನಾಗೇಶ್ವರ ರಾವ್‌ರನ್ನು ಸಿಬಿಐ ಮಧ್ಯಾವಧಿ ನಿರ್ದೇಶಕರನ್ನಾಗಿ ನೇಮಿಸುವ ಕುರಿತು ನಡೆದ ಉನ್ನತಾಧಿಕಾರದ ಆಯ್ಕೆ ಸಮಿತಿಯ ಸಭೆಯ ‘ತಿರುಚಿದ ನಿರ್ಣಯ’ಗಳನ್ನು ಬಹುಷಃ ಸರಕಾರ ನ್ಯಾಯಾಲಯಕ್ಕೆ ಸಲ್ಲಿಸಿದೆ ಎಂದು ಟ್ವೀಟ್ ಮಾಡುವ ಮೂಲಕ ತಾನು ತಪ್ಪು ಎಸಗಿದ್ದೇನೆ . ಆದರೆ ಇದು ದುರುದ್ದೇಶ ರಹಿತ ತಪ್ಪು ಎಂದು ವಕೀಲ ಪ್ರಶಾಂತ್ ಭೂಷಣ್ ಒಪ್ಪಿಕೊಂಡಿದ್ದಾರೆ.

ಭೂಷಣ್ ಅವರ ಹೇಳಿಕೆಯ ಹಿನ್ನೆಲೆಯಲ್ಲಿ ತಾನು ಅವರ ವಿರುದ್ಧ ಸಲ್ಲಿಸಿದ್ದ ನ್ಯಾಯಾಲಯ ನಿಂದನೆ ಅರ್ಜಿಯನ್ನು ವಾಪಾಸು ಪಡೆಯಲು ಬಯಸಿರುವುದಾಗಿ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ನ್ಯಾಯಾಲಯಕ್ಕೆ ತಿಳಿಸಿದರು. ಈ ಸಂದರ್ಭ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡ ಭೂಷಣ್, ವೇಣುಗೋಪಾಲ್ ಸಲ್ಲಿಸಿರುವ ನ್ಯಾಯಾಂಗ ನಿಂದನೆಯ ಅರ್ಜಿಯ ವಿಚಾರಣೆಯಿಂದ ನ್ಯಾ. ಅರುಣ್ ಮಿಶ್ರರನ್ನು ಹೊರಗಿರಿಸಬೇಕೆಂದು ಕೋರಿದರು.

ಈ ಮಧ್ಯೆ, ನ್ಯಾಯಾಂಗ ನಿಂದನೆ ಅರ್ಜಿಯನ್ನು ವಾಪಾಸು ಪಡೆಯುವ ತನ್ನ ಹೇಳಿಕೆಗೆ ಬದ್ಧನಾಗಿದ್ದೇನೆ ಎಂದು ವೇಣುಗೋಪಾಲ್ ನ್ಯಾಯಪೀಠಕ್ಕೆ ತಿಳಿಸಿದರು. ಆದರೆ ವಿಚಾರಣಾ ಹಂತದಲ್ಲಿರುವ ಪ್ರಕರಣದ ಬಗ್ಗೆ ಓರ್ವ ವ್ಯಕ್ತಿ ನ್ಯಾಯಾಲಯವನ್ನು ಟೀಕಿಸುವ ಮೂಲಕ ಸಾರ್ವಜನಿಕರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಬಹುದೇ ಎಂಬ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಗಮನಿಸುವುದಾಗಿ ನ್ಯಾಯಪೀಠ ತಿಳಿಸಿತು . ಬಳಿಕ ನ್ಯಾಯಪೀಠವು ಮುಂದಿನ ವಿಚಾರಣೆಯನ್ನು ಎಪ್ರಿಲ್ 3ಕ್ಕೆ ನಿಗದಿಗೊಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News