ಒಡಕು ಹುಟ್ಟಿಸುವ ಬರಹಗಳ ನಿಗ್ರಹ: ‘ಫೇಸ್‌ಬುಕ್’ಗೆ ಸಂಸದೀಯ ಸಮಿತಿ ಸೂಚನೆ

Update: 2019-03-07 16:59 GMT

ಹೊಸದಿಲ್ಲಿ, ಮಾ.7: ವಾಟ್ಸಾಪ್ ಮತ್ತು ಇನ್‌ಸ್ಟ್ರಾಗ್ರಾಂ ವೇದಿಕೆಯಲ್ಲಿ ಒಡಕು ಮೂಡಿಸುವ, ಹಿಂಸಾಚಾರಕ್ಕೆ ಪ್ರಚೋದಿಸುವ , ಭಾರತದ ಭದ್ರತೆಗೆ ಬೆದರಿಕೆ ಒಡ್ಡುವ ರೀತಿಯ ಬರಹಗಳನ್ನು ಪೋಸ್ಟ್ ಮಾಡದಂತೆ ಅಥವಾ ಮುಂಬರುವ ಚುನಾವಣೆಯಲ್ಲಿ ವಿದೇಶಿ ಶಕ್ತಿಗಳು ಕೈವಾಡ ನಡೆಸಲು ಆಸ್ಪದ ನೀಡದಂತೆ ಕ್ರಮ ಕೈಗೊಳ್ಳಬೇಕು ಎಂದು ಮಾಹಿತಿ ತಂತ್ರಜ್ಞಾನದ ಕುರಿತಾದ ಸಂಸದೀಯ ಸಮಿತಿಯು ಫೇಸ್‌ಬುಕ್‌ಗೆ ತಿಳಿಸಿದೆ.

ಅಲ್ಲದೆ , ರಾಷ್ಟ್ರೀಯ ಭದ್ರತೆಗೆ ನೀಡುವಷ್ಟೇ ಆದ್ಯತೆಯನ್ನು ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ರಕ್ಷಿಸುವುದಕ್ಕೂ ನೀಡಬೇಕು ಮತ್ತು ಈ ಬಗ್ಗೆ ಕೈಗೊಂಡಿರುವ ಕ್ರಮಗಳ ಬಗ್ಗೆ 10 ದಿನದೊಳಗೆ ತಿಳಿಸಬೇಕೆಂದು ಫೇಸ್‌ಬುಕ್‌ನ ‘ಜಾಗತಿಕ ಸಾರ್ವಜನಿಕ ನೀತಿ’ ವಿಭಾಗದ ಉಪಾಧ್ಯಕ್ಷ ಜೊಯೆಲ್ ಕಪ್ಲಾನ್‌ಗೆ ತಿಳಿಸಿದೆ. ಸುಧಾರಿಸುವ ಕ್ರಮಗಳ ಅಗತ್ಯವಿದೆ ಎಂದು ಸಂಸದೀಯ ಸಮಿತಿಯ ಎದುರು ಹಾಜರಾಗಿದ್ದ ಕಪ್ಲಾನ್ ಒಪ್ಪಿಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಜಾಹೀರಾತುದಾರರ ಗುರುತು ಮತ್ತು ಸ್ಥಳದ ಕುರಿತ ಮಾಹಿತಿಗೆ ಸಂಬಂಧಿಸಿದಂತೆ ಸಂಸ್ಥೆಯು ಚುನಾವಣಾ ಆಯೋಗ ಹಾಗೂ ಸಚಿವಾಲಯದೊಂದಿಗೆ ಸಂಪರ್ಕದಲ್ಲಿರುತ್ತದೆ ಎಂದು ‘ಫೇಸ್‌ಬುಕ್ ಇಂಡಿಯಾ’ದ ಆಡಳಿತ ನಿರ್ದೇಶಕ ಅಜಿತ್ ಮೋಹನ್ ಹೇಳಿದ್ದಾರೆ. ಚುನಾವಣೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನೂ ವಿಶೇಷ ವೆಬ್ ಪುಟದಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರದರ್ಶಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪುಲ್ವಾಮ ದಾಳಿ ಹಾಗೂ ಆ ಬಳಿಕ ಭಾರತದ ವಾಯುಪಡೆ ಪಾಕಿಸ್ತಾನದ ಬಾಲ್‌ಕೋಟ್‌ನಲ್ಲಿ ನಡೆಸಿದ ದಾಳಿಯ ಬಳಿಕ ಫೇಸ್‌ಬುಕ್‌ನ ಕೆಲವು ಸಿಬ್ಬಂದಿ ’ ಊಹಾತ್ಮಕ ಬರಹಗಳನ್ನು ಪೋಸ್ಟ್ ಮಾಡಿರುವುದನ್ನು ಉಲ್ಲೇಖಿಸಿದ ಸಮಿತಿಯ ಸದಸ್ಯರು, ಇಂತಹ ಬರಹಗಳಿಂದ ಕ್ರಿಮಿನಲ್ ವಿಷಯವೊಂದನ್ನು ರಾಜಕೀಯಗೊಳಿಸುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದಾಗ ಈ ಬಗ್ಗೆ ಕಪ್ಲಾನ್ ಕ್ಷಮೆ ಯಾಚಿಸಿದರು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News