ಕೇರಳ ಪೊಲೀಸರೊಂದಿಗೆ ಗುಂಡಿನ ಚಕಮಕಿ: ಮಾವೋವಾದಿ ಮುಖಂಡ ಜಲೀಲ್ ಹತ್ಯೆ

Update: 2019-03-07 17:04 GMT

ತಿರುವನಂತಪುರಂ, ಮಾ.7: ವಯನಾಡ್ ಜಿಲ್ಲೆಯ ಲಕ್ಕಿಡಿ ಎಂಬಲ್ಲಿ ಕೇರಳ ಪೊಲೀಸರ ಥಂಡರ್‌ ಬೋಲ್ಟ್ ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಮಾವೋವಾದಿ ಮುಖಂಡ ಸಿಪಿ ಜಲೀಲ್ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಲಕ್ಕಿಡಿಯ ಉಪವನ ರಿಸಾರ್ಟ್‌ನ ಮಾಲಕರಿಗೆ ಹಣ ಮತ್ತು ದೈನಂದಿನ ಬಳಕೆಯ ಸಾಮಗ್ರಿ ಒದಗಿಸುವಂತೆ ಬೇಡಿಕೆ ಇರಿಸಿದ್ದ ಜಲೀಲ್ ನೇತೃತ್ವದ ತಂಡದವರು ಇವನ್ನು ಪಡೆದುಕೊಳ್ಳಲು ಬುಧವಾರ ತಡರಾತ್ರಿ ಅಲ್ಲಿಗೆ ಬಂದಿದ್ದರು ಎನ್ನಲಾಗಿದೆ. ಇದೇ ಸಂದರ್ಭ ಪರಿಸರದ ಮೇಲೆ ನಿಗಾ ಇರಿಸಿದ್ದ ಥಂಡರ್‌ ಬೋಲ್ಟ್ ಪಡೆ ಮತ್ತು ಜಲೀಲ್ ತಂಡದ ಮಧ್ಯೆ ಗುಂಡಿನ ಚಕಮಕಿ ಆರಂಭವಾಗಿದ್ದು ಗುರುವಾರ ಬೆಳಿಗ್ಗಿನ ವರೆಗೂ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರು ಹೆದ್ದಾರಿಯ ಪಕ್ಕದಲ್ಲಿರುವ ರೆಸಾರ್ಟ್‌ನ ಆವರಣದಲ್ಲಿ ಗುಂಡಿನ ಚಕಮಕಿ ನಡೆದಿದೆ. ಗುಂಡಿನ ಚಕಮಕಿಯಲ್ಲಿ ಸುಮಾರು 8 ಮಂದಿ ಮಾವೋವಾದಿ ಕಾರ್ಯಕರ್ತರು ಪಾಲ್ಗೊಂಡಿದ್ದರು. ಕಾರ್ಯಾಚರಣೆಯಲ್ಲಿ ಮೃತಪಟ್ಟವನನ್ನು ಜಲೀಲ್ ಎಂದು ಗುರುತಿಸಲಾಗಿದೆ. ಮತ್ತೊಬ್ಬ ಗಂಭೀರ ಗಾಯಗೊಂಡ ಸ್ಥಿತಿಯಲ್ಲಿ ಕಂಡುಬಂದಿದ್ದು ಆತನನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ಸಾಗಿಸಲಾಗಿದೆ . ಉಳಿದವರ ಬಗ್ಗೆ ಇನ್ನೂ ಮಾಹಿತಿ ದೊರೆತಿಲ್ಲ ಎಂದು ಸ್ಥಳದಲ್ಲಿದ್ದ ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಯನಾಡ್‌ನ ಸುಗಂಧಗಿರಿ ಅರಣ್ಯದಲ್ಲಿ ಮಾವೋವಾದಿಗಳ ಚಲನ ವಲನದ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ಥಂಡರ್‌ಬೋಲ್ಟ್ ಪಡೆಯನ್ನು ನಿಯೋಜಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಥಂಡರ್‌ಬೋಲ್ಟ್ ಎಂಬುದು ಕೇರಳ ಪೊಲೀಸ್ ಪಡೆಯ ವಿಶೇಷ ಕಮಾಂಡೊ ಪಡೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News