‘ಹಿಂದುಸ್ತಾನ್ ಯುನಿಲಿವರ್’ ಉತ್ಪನ್ನಗಳ ಬಹಿಷ್ಕಾರಕ್ಕೆ ಭಾರೀ ಒತ್ತಾಯ

Update: 2019-03-07 17:46 GMT

ಹೊಸದಿಲ್ಲಿ, ಮಾ.7: ಗ್ರಾಹಕ ಬಳಕೆ ಉತ್ಪನ್ನಗಳ ಬೃಹತ್ ಸಂಸ್ಥೆಯಾದ ‘ಹಿಂದುಸ್ತಾನ್ ಯುನಿಲಿವರ್’ ಸಂಸ್ಥೆಯ ಜಾಹೀರಾತಿನಲ್ಲಿ ಕುಂಭಮೇಳಕ್ಕೆ ಅಗೌರವ ತೋರಲಾಗಿದೆ ಎಂದು ಆರೋಪಿಸಲಾಗಿದ್ದು, ಈ ಸಂಸ್ಥೆಯ ಉತ್ಪನ್ನಗಳನ್ನು ಬಹಿಷ್ಕರಿಸಬೇಕೆಂದು ಸಾಮಾಜಿಕ ಮಾಧ್ಯಮಗಳಲ್ಲಿ ಆಗ್ರಹಿಸಲಾಗಿದೆ.

ಸಂಸ್ಥೆಯ ಉತ್ಪನ್ನವಾದ ‘ರೆಡ್ ಲೇಬಲ್’ ಚಹಾಪುಡಿಯ ಜಾಹೀರಾತು ಟ್ವಿಟರ್‌ನಲ್ಲಿ ಪ್ರಕಟವಾಗಿದ್ದು ಇದರಲ್ಲಿ ಕುಂಭಮೇಳ ಎಂಬುದು ವೃದ್ಧರನ್ನು ತ್ಯಜಿಸಿಬಿಡುವ ಸ್ಥಳವಾಗಿದೆ ಎಂದು ತಿಳಿಸಲಾಗಿದೆ. ನಮ್ಮ ಹಿರಿಯರ ಬಗ್ಗೆ ಕಾಳಜಿ ತೋರುವಷ್ಟೂ ವ್ಯವಧಾನ ನಮ್ಮಲ್ಲಿಲ್ಲವೇ. ನಮಗೆ ಒಂದು ವ್ಯಕ್ತಿತ್ವ ರೂಪಿಸಿಕೊಟ್ಟ ಹಿರಿಯರ ಕೈ ಹಿಡಿಯಲು ರೆಡ್‌ಲೇಬಲ್ ಪ್ರೋತ್ಸಾಹ ನೀಡುತ್ತದೆ. ಹೃದಯಕ್ಕೇ ನಾಟುವ ಈ ವೀಡಿಯೊವನ್ನು ವೀಕ್ಷಿಸಿ. ಕರಾಳ ವಾಸ್ತವತೆಯತ್ತ ಬೆಳಕು ಚೆಲ್ಲುವ ವೀಡಿಯೊ ಇದು’ ಎಂದು ಜಾಹೀರಾತಿನಲ್ಲಿ ತಿಳಿಸಲಾಗಿದೆ. ಜಾಹೀರಾತಿನಲ್ಲಿ ಓರ್ವ ವ್ಯಕ್ತಿ, ಕುಂಭಮೇಳಕ್ಕೆ ಹೋಗಿ ಅಲ್ಲಿ ತನ್ನ ವೃದ್ಧ ತಂದೆಯನ್ನು ತ್ಯಜಿಸಿ ಬರುವ ಬಗ್ಗೆ ಯೋಚಿಸುತ್ತಾನೆ. ಆದರೆ ಬಳಿಕ ತನ್ನ ತಪ್ಪನ್ನು ಅರಿತುಕೊಂಡು ತಂದೆಯೊಡನೆ ಒಂದು ಕಪ್ ರೆಡ್‌ ಲೇಬಲ್ ಚಹಾ ಕುಡಿಯಲು ನಿರ್ಧರಿಸುತ್ತಾನೆ.

ಈ ಜಾಹೀರಾತು ಹಿಂದುಗಳ ಭಾವನೆಗೆ ಧಕ್ಕೆ ತರುತ್ತಿದೆ ಮತ್ತು ವಿಶ್ವದ ಅತ್ಯಂತ ಬೃಹತ್ ಧಾರ್ಮಿಕ ಉತ್ಸವದ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸುತ್ತದೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಹಿಂದುಸ್ತಾನ್ ಯುನಿಲಿವರ್ ಸಂಸ್ಥೆಯ ಉತ್ಪನ್ನಗಳ ಬಹಿಷ್ಕಾರಕ್ಕೆ ಹಲವಾರು ಮಂದಿ ಟ್ವಿಟರ್‌ನಲ್ಲಿ ಕರೆ ನೀಡಿದ್ದಾರೆ. ಈ ಅಭಿಯಾನಕ್ಕೆ ಯೋಗ ಗುರು ರಾಮದೇವ್ ಕೂಡಾ ಕೈಜೋಡಿಸಿದ್ದಾರೆ. ರಾಮ್‌ದೇವ್ ಅವರ ಪತಂಜಲಿ ಸಂಸ್ಥೆ ಗ್ರಾಹಕರ ದೈನಂದಿನ ಉತ್ಪನ್ನಗಳ ಮಾರಾಟ ಕ್ಷೇತ್ರದಲ್ಲಿ ಹಿಂದುಸ್ತಾನ್ ಯುನಿಲಿವರ್ ಸಂಸ್ಥೆಯೊಂದಿಗೆ ಪೈಪೋಟಿ ನಡೆಸುತ್ತಿರುವುದನ್ನು ಇಲ್ಲಿ ಉಲ್ಲೇಖಿಸಬಹುದು.

ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶದ ಬಿಸಿ ಹೆಚ್ಚುತ್ತಿರುವಂತೆಯೇ ಎಚ್ಚೆತ್ತುಕೊಂಡಿರುವ ಹಿಂದುಸ್ತಾನ್ ಯುನಿಲಿವರ್ ಸಂಸ್ಥೆ, ತನ್ನ ಜಾಹೀರಾತನ್ನು ವಾಪಾಸು ಪಡೆದು , ಪರಿಷ್ಕೃತ ಜಾಹೀರಾತನ್ನು ಪ್ರಕಟಿಸಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News