ಒಡಿಶಾ: ನಿಯಮಗಿರಿ ಹೋರಾಟಗಾರನ ಬಂಧನ

Update: 2019-03-07 17:55 GMT

ಭವಾನಿಪಟ್ನ,ಮಾ.7: ಪಶ್ಚಿಮ ಒಡಿಶಾದಲ್ಲಿ ಅಭಿವೃದ್ಧಿ ಕಾರ್ಯಗಳು ಮತ್ತು ಸಿಆರ್‌ಪಿಎಫ್ ಶಿಬಿರ ನಿರ್ಮಾಣಕ್ಕೆ ತಡೆಯೊಡ್ಡಿದ ಆರೋಪದಲ್ಲಿ ಹಕ್ಕುಗಳ ಹೋರಾಟಗಾರನನ್ನು ಇಲ್ಲಿನ ಕಲಾಹಂಡಿ ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎರಡು ಅಪರಾಧಿ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಕೇಸಿಂಗ ಪೊಲೀಸ್ ಠಾಣಾ ವ್ಯಾಪ್ತಿಯ ಕಂಡೆಲ್‌ನ ಗ್ರಾಮವೊಂದರಿಂದ ಲಿಂಗರಾಜ್ ಬಗ್ ಅಲಿಯಾಸ್ ಆಝಾದ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ಕುಮಾರ್ ಮಹಂತಾ ತಿಳಿಸಿದ್ದಾರೆ. ಆಝಾದ್, ಪಶ್ಚಿಮ ಒಡಿಶಾದ ನಿಯಮಗಿರಿ ಬೆಟ್ಟಗಳನ್ನು ಗಣಿಗಾರಿಕೆ ಮತ್ತು ಕೈಗಾರೀಕರಣದಿಂದ ರಕ್ಷಿಸುವ ಚಳುವಳಿ ನಿಯಮಗಿರಿ ಸುರಕ್ಷಾ ಸಮಿತಿ (ಎನ್‌ಎಸ್‌ಎಸ್) ಯ ಸಂಚಾಲಕರಾಗಿದ್ದಾರೆ.

ತ್ರಿಲೋಚನಾಪುರದಲ್ಲಿ ಸಿಆರ್‌ಪಿಎಫ್ ಶಿಬಿರ ನಿರ್ಮಿಸಲು ಅಡ್ಡಿ, ಆಯುಧಗಳನ್ನು ಪ್ರದರ್ಶಿಸಿ ಅವಾಚ್ಯ ಶಬ್ದಗಳಿಂದ ನಿಂದಿಸುವ ಮೂಲಕ ಜನರನ್ನು ಮತ್ತು ಅಧಿಕಾರಿಗಳನ್ನು ಬೆದರಿಸುವ ಹಾಗೂ ಸಾರ್ವಜನಿಕರನ್ನು ಆಡಳಿತದ ವಿರುದ್ಧ ಪ್ರಚೋದಿಸುವ ಮೂಲಕ ಆಝಾದ್ ನಿಯಮಗಿರಿ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News