ಉಗ್ರರ ವಿರುದ್ಧ ‘ನವ ಪಾಕಿಸ್ತಾನ’ ‘ನೂತನ ಕ್ರಮ’ ಕೈಗೊಳ್ಳಬೇಕು: ಭಾರತ

Update: 2019-03-09 15:11 GMT

ಹೊಸದಿಲ್ಲಿ, ಮಾ.9: ತಾನು ಹೊಸ ಯೋಚನಾ ಲಹರಿಯ ನವ ಸರಕಾರ ಎಂದು ಹೇಳಿಕೊಳ್ಳುತ್ತಿರುವ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನದ ಸರಕಾರ , ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಮೂಲಕ ತನ್ನ ಮಾತನ್ನು ಸಮರ್ಥಿಸಿಕೊಳ್ಳಬೇಕು ಎಂದು ಭಾರತದ ವಿದೇಶ ವ್ಯವಹಾರ ಇಲಾಖೆಯ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ತನ್ನ ನೆಲದಿಂದ ಕಾರ್ಯಾಚರಿಸುತ್ತಿರುವ ಜೈಷೆ ಮುಹಮ್ಮದ್(ಜೆಇಎಂ) ಹಾಗೂ ಇತರ ಉಗ್ರರ ಸಂಘಟನೆಗಳ ವಿರುದ್ಧ ಪಾಕಿಸ್ತಾನ ಯಾವುದೇ ವಿಶ್ವಾಸಾರ್ಹ ಕ್ರಮ ಕೈಗೊಳ್ಳಲು ವಿಫಲವಾಗಿದೆ ಎಂದರು. ಪಾಕಿಸ್ತಾನದವರು ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಕೇವಲ ಹೇಳಿಕೆ ನೀಡಿದರೆ ಸಾಲದು, ಇದನ್ನು ಕೃತ್ಯದಲ್ಲಿ ಸಾಬೀತುಪಡಿಸಬೇಕು. ಗಝೆಟ್‌ನಲ್ಲಿ ಪ್ರಕಟಣೆ ಹೊರಡಿಸುವ ಜೊತೆಗೆ, ಉಗ್ರರ ನಿಗ್ರಹ ಕಾರ್ಯ ಆರಂಭಿಸಬೇಕು ಎಂದವರು ಹೇಳಿದರು.

ಪುಲ್ವಾಮದಲ್ಲಿ ನಡೆದಿದ್ದ ಆತ್ಮಹತ್ಯಾ ದಾಳಿಯ ಹೊಣೆಯನ್ನು ಜೆಇಎಂ ಸಂಘಟನೆ ಹೊತ್ತುಕೊಂಡಿದ್ದರೂ , ಈ ಘಟನೆಗೆ ಜೆಇಎಂ ಕಾರಣವಲ್ಲ ಎಂದು ಪಾಕ್ ಸರಕಾರ ಹೇಳುತ್ತಿದೆ. ಉಗ್ರರ ಸಂಘಟನೆಯನ್ನು ಸಮರ್ಥಿಸಿಕೊಳ್ಳುವ ಮೂಲಕ ಪಾಕ್ ಸರಕಾರ ಜೆಇಎಂನ ವಕ್ತಾರನಂತೆ ವರ್ತಿಸುತ್ತಿದೆ ಎಂದು ಕುಮಾರ್ ಹೇಳಿದರು. ಭಾರತೀಯ ವಾಯುಪಡೆಯ ಎರಡು ಯುದ್ಧವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂಬ ಪಾಕ್ ಹೇಳಿಕೆಯನ್ನು ನಿರಾಕರಿಸಿದ ಅವರು, ಪಾಕಿಸ್ತಾನ ಸುಳ್ಳು ಸುದ್ದಿಯನ್ನು ಪ್ರಚಾರ ಮಾಡುತ್ತಿದೆ ಎಂದರು. ಭಾರತೀಯ ವಾಯುಪಡೆಯ ಎರಡು ವಿಮಾನಗಳನ್ನು ಹೊಡೆದುರುಳಿಸಿರುವ ಬಗ್ಗೆ ಪಾಕ್ ಬಳಿ ಸಾಕ್ಷವಿದ್ದರೆ ಅವರು ಅಂತಾರಾಷ್ಟ್ರೀಯ ಮಾಧ್ಯಮಗಳೊಂದಿಗೆ ಹಂಚಿಕೊಳ್ಳಲು ಯಾಕೆ ಹಿಂಜರಿಯುತ್ತಾರೆ ಎಂದು ರವೀಶ್ ಪ್ರಶ್ನಿಸಿದರು.

ಭಾರತವು ತನ್ನ ಎಫ್-16 ವಿಮಾನವನ್ನು ಹೊಡೆದುರುಳಿಸಿಲ್ಲ ಎಂಬ ಪಾಕ್ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಕುರಿತು ಪ್ರತ್ಯಕ್ಷದರ್ಶಿಗಳ ಸಾಕ್ಷಿಯಿದೆ ಹಾಗೂ ಇಲೆಕ್ಟ್ರಾನಿಕ್ಸ್ ಪುರಾವೆಗಳಿವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News