ನೀರವ್ ಮೋದಿ ಗಡಿಪಾರು ಮನವಿ: ಬ್ರಿಟನ್ ಗೃಹಕಾರ್ಯದರ್ಶಿಯಿಂದ ನ್ಯಾಯಾಲಯಕ್ಕೆ ಸಲ್ಲಿಕೆ
ಹೊಸದಿಲ್ಲಿ,ಮಾ.9: ಪಿಎನ್‌ಬಿ ವಂಚನೆ ಪ್ರಕರಣದ ಆರೋಪಿ ನೀರವ್ ಮೋದಿ ಗಡಿಪಾರು ಮನವಿಗೆ ಸಂಬಂಧಪಟ್ಟಂತೆ ಮುಂದಿನ ಕಾನೂನು ಪ್ರಕ್ರಿಯೆಯನ್ನು ಆರಂಭಿಸಲು ಈ ಮನವಿಯನ್ನು ಬ್ರಿಟನ್ ಗೃಹ ಕಾರ್ಯದರ್ಶಿ ಸ್ಥಳೀಯ ನ್ಯಾಯಾಲಯಕ್ಕೆ ಕಳುಹಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಶನಿವಾರ ತಿಳಿಸಿದೆ.
ನೀರವ್ ಮೋದಿ ಗಡಿಪಾರು ಮನವಿಯನ್ನು ಭಾರತ 2018ರ ಜುಲೈಯಲ್ಲಿ ಬ್ರಿಟನ್‌ಗೆ ಕಳುಹಿಸಿತ್ತು. ಈ ಮನವಿಯನ್ನು ವೆಸ್ಟ್‌ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶರಿಗೆ ಕಳುಹಿಸಲಾಗಿದೆ ಎಂದು ಬ್ರಿಟನ್ ಗೃಹಕಚೇರಿಯ ಕೇಂದ್ರ ಪ್ರಾಧಿಕಾರ ತಿಳಿಸಿದೆ ಎಂದು ಇಡಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಪಂಜಾಬ್ ಆ್ಯಂಡ್ ನ್ಯಾಶನಲ್ ಬ್ಯಾಂಕ್‌ಗೆ ಎರಡು ಬಿಲಿಯನ್ ಡಾಲರ್ ವಂಚಿಸಿರುವ ಆರೋಪ ಹೊಂದಿರುವ ನೀರವ್ ಮೋದಿ ಲಂಡನ್‌ನ ವೆಸ್ಟ್ ಎಂಡ್‌ನಲ್ಲಿ ಎಂಟು ಮಿಲಿಯನ್ ಪೌಂಡ್ ಬೆಲೆಬಾಳುವ ಐಷಾರಾಮಿ ಬಂಗಲೆಯಲ್ಲಿ ವಾಸವಾಗಿದ್ದು ಹೊಸ ವಜ್ರಾಭರಣ ವ್ಯವಹಾರವನ್ನು ಆರಂಭಿಸಿದ್ದಾರೆ ಎಂದು ಬ್ರಿಟಿಶ್ ಪತ್ರಿಕೆ ಶನಿವಾರ ವರದಿ ಮಾಡಿತ್ತು.
ಬ್ರಿಟನ್ ಗೃಹ ಕಾರ್ಯದರ್ಶಿ ಸಾಜಿದ್ ಜಾವಿದ್ ಈ ಪ್ರಕರಣವನ್ನು ಲಂಡನ್ ನ್ಯಾಯಾಲಯಕ್ಕೆ ವರ್ಗಾಯಿಸುತ್ತಿದ್ದಾರೆ ಎಂಬ ಮಾಹಿತಿ ನಮಗೆ ಎರಡು ದಿನಗಳ ಮೊದಲಷ್ಟೇ ಲಭಿಸಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯದಲ್ಲೇ ಇಡಿ ಮತ್ತು ಸಿಬಿಐ ಅಧಿಕಾರಿಗಳ ಜಂಟಿ ತಂಡ ಬ್ರಿಟನ್‌ಗೆ ತೆರಳಿ ವಕೀಲರಿಗೆ ಭಾರತದ ವಾದವನ್ನು ವಿವರಿಸಲಿದೆ ಮತ್ತು ನೀರವ್ ಮೋದಿ ವಿರುದ್ಧ ಸಾಕ್ಷಿಯನ್ನು ನೀಡಲಿದೆ. ಇನ್ನೊರ್ವ ಬ್ಯಾಂಕ್ ವಂಚಕ ವಿಜಯ್ ಮಲ್ಯಾ ಪ್ರಕರಣದಲ್ಲಿ ನಡೆದಂತೆ ಇಲ್ಲೂ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.